2019ರಲ್ಲಿ 100 ಕೋಟಿ ಟನ್ ಆಹಾರ ವ್ಯರ್ಥ: ವಿಶ್ವಸಂಸ್ಥೆ

ಪ್ಯಾರಿಸ್ (ಫ್ರಾನ್ಸ್), ಮಾ. 5: 2019ರಲ್ಲಿ ಲಭ್ಯವಿದ್ದ ಒಟ್ಟು ಆಹಾರದ ಪೈಕಿ 17 ಶೇಕಡದಷ್ಟನ್ನು ಚೆಲ್ಲಲಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ ತಿಳಿಸಿದೆ. ಮನೆಗಳು, ಅಂಗಡಿಗಳು, ಸಂಸ್ಥೆಗಳು ಮತ್ತು ಆತಿಥ್ಯ ಉದ್ಯಮಗಳು ಸುಮಾರು 100 ಕೋಟಿ ಟನ್ ಆಹಾರವನ್ನು ವ್ಯರ್ಥಗೊಳಿಸಿವೆ ಹಾಗೂ ಇದು ಈ ಹಿಂದೆ ಭಾವಿಸಿರುವುದಕ್ಕಿಂತ ತುಂಬಾ ಹೆಚ್ಚಾಗಿದೆ ಎಂದು ಅದು ಹೇಳಿದೆ.
‘‘ಈ ಸಮಸ್ಯೆಯ ಪ್ರಮಾಣ ಬೃಹತ್ ಆಗಿದೆ’’ ಎಂದು ಪರೋಪಕಾರ ಸಂಸ್ಥೆ ‘ವೇಸ್ಟ್ ಆ್ಯಂಡ್ ರಿಸೋರ್ಸಸ್ ಆ್ಯಕ್ಷನ್ ಪ್ರೋಗ್ರಾಮ್ (ಡಬ್ಲ್ಯುಆರ್‌ಎಪಿ)ನ ಅಭಿವೃದ್ಧಿ ಅಧಿಕಾರಿ ರಿಚರ್ಡ್ ಸ್ವಾನೆಲ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಡಬ್ಲ್ಯುಆರ್‌ಎಪಿಯು ವಿಶ್ವಸಂಸ್ಥೆ ವರದಿಯ ಸಹಲೇಖಕನಾಗಿದೆ.
‘‘ಇದು ಪಾರಿಸರಿಕ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಗಳಲ್ಲಿ ದುಬಾರಿಯಾಗಿದೆ’’ ಎಂದು ಅವರು ಹೇಳಿದರು.
ಎಲ್ಲ ವ್ಯರ್ಥಗೊಂಡ ಆಹಾರಗಳನ್ನು 40 ಟನ್ ಸಾಮರ್ಥ್ಯದ ಕಂಟೇನರ್ ಟ್ರಕ್‌ಗಳಿಗೆ ತುಂಬಿಸಿ ಅವುಗಳನ್ನು ಒಂದಕ್ಕೊಂದು ತಾಗಿಸಿ ಇಟ್ಟರೆ ಅವುಗಳು ಜಗತ್ತಿಗೆ ಏಳು ಸುತ್ತುಗಳನ್ನು ಹಾಕಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಅದೇ ವೇಳೆ, ಪ್ರತಿ ರಾತ್ರಿ ಸುಮಾರು 70 ಕೋಟಿ ಜನರು ಹಸಿದು ಮಲಗುತ್ತಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.





