ಹುಣಸೋಡು ಸ್ಫೋಟ: ಪರಿಹಾರಕ್ಕೆ ಆಗ್ರಹಿಸಿ ಹಾನಿಗೊಳಗಾದ ಮನೆಗಳ ನಿವಾಸಿಗಳಿಂದ ಧರಣಿ

ಶಿವಮೊಗ್ಗ,ಮಾ.5: ಹುಣಸೋಡು ಸ್ಫೋಟದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ, ಹಾನಿಗೊಳಗಾದ ಮನೆಗಳ ನಿವಾಸಿಗಳು ಶುಕ್ರವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ನಗರದ ಹೊರವಲಯದ ಹುಣಸೋಡು ಬಳಿ ಜ.21ರ ರಾತ್ರಿ ಕಲ್ಲುಕ್ವಾರಿಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಫೋಟಗೊಂಡು ಶಿವಮೊಗ್ಗ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಯಲ್ಲೂ ಸಹ ಭೂಕಂಪನ ಉಂಟಾಗಿತ್ತು. ಭಾರಿ ಸ್ಫೋಟದಿಂದಾಗಿ ಹುಣಸೋಡು ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವು ಮನೆಗಳ ಛಾವಣಿ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ ಎಂದು ಧರಣಿ ನಿರತರು ಆರೋಪಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರೂ ಗ್ರಾಮಸ್ಥರು ಲಕ್ಷಾಂತರ ರೂ. ನಷ್ಟ ಅನುಭವಿಸಿದಂತಾಗಿದೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕೋರಿ ಸುಮಾರು 500 ಅರ್ಜಿಗಳು ಬಂದಿದ್ದು, ತಿಂಗಳು ಕಳೆದರು ಸಹ ಅಧಿಕಾರಿಗಳು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿಲ್ಲ ಹಾಗೂ ಪರಿಹಾರವನ್ನು ಸಹ ನೀಡಿಲ್ಲ. ಆದ್ದರಿಂದ ಕೂಡಲೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಧರಣಿ ಸತ್ಯಾಗ್ರಹದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ.ರಮೇಶ್ಗೌಡ, ಶಿವಣ್ಣ, ಸಂತೋಷ್, ದೇವೇಂದ್ರಪ್ಪ, ನಯನ, ಆಶ್ರಫ್, ಪರಶುರಾಮ, ಹೆಚ್.ಲೋಕೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.







