ಕೃಷಿ ಕಾನೂನುಗಳ ವಿರುದ್ಧ ನಿರ್ಣಯಕ್ಕೆ ಪಂಜಾಬ್ ವಿಧಾನಸಭೆಯ ಅಂಗೀಕಾರ

ಚಂಡಿಗಡ,ಮಾ.6: ರೈತರು ಮತ್ತು ಪಂಜಾಬಿನ ಹಿತಾಸಕ್ತಿಯಲ್ಲಿ ಕೃಷಿ ಕಾನೂನುಗಳನ್ನು ಬೇಷರತ್ ಹಿಂದೆಗೆದುಕೊಳ್ಳಬೇಕು ಮತ್ತು ಸರಕಾರದಿಂದ ಎಂಎಸ್‌ಪಿ ಆಧಾರಿತ ಆಹಾರಧಾನ್ಯಗಳ ಖರೀದಿಯ ಹಾಲಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ನಿರ್ಣಯವೊಂದನ್ನು ಪಂಜಾಬ್ ವಿಧಾನಸಭೆಯು ಅಂಗೀಕರಿಸಿದೆ.
ಸದನದಲ್ಲಿ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೃಷಿ ಕಾನೂನುಗಳ ಹಿಂದಿನ ಸರಕಾರದ ನಿಜವಾದ ಉದ್ದೇಶವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ದೇಶದ ಮುಂದೆ 10 ಪ್ರಶ್ನೆಗಳನ್ನಿರಿಸಿದರು. ಯಾವುದೇ ಸಂದರ್ಭದಲ್ಲಿಯೂ ರೈತರಿಗೆ ಮತ್ತು ರಾಜ್ಯಕ್ಕೆ ಈ ಕಾನೂನುಗಳು ಸ್ವೀಕಾರಾರ್ಹವಲ್ಲ ಎಂದರು.
ಸಂಪೂರ್ಣವಾಗಿ ನಿಯಂತ್ರಣಮುಕ್ತ ಖಾಸಗಿ ಮಂಡಿಗಳಿಂದ ಯಾರಿಗೆ ಲಾಭವಾಗಲಿದೆ? ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದಕ್ಕ ಸಂಬಂಧಿಸಿದ ಯಾವುದೇ ವಿವಾದದಲ್ಲಿ ರೈತರು ಸಿವಿಲ್ ನ್ಯಾಯಾಲಯಗಳ ಮೆಟ್ಟಿಲೇರುವುದನ್ನು ನಿಷೇಧಿಸುವುದರಿಂದ ಯಾರು ಲಾಭ ಪಡೆಯಲಿದ್ದಾರೆ ಎಂದು ಸಿಂಗ್ ಪ್ರಶ್ನಿಸಿದರು.
ರಾಜಿ ಪರಿಹಾರಕ್ಕಾಗಿ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಪ್ರತಿಭಟನಾನಿರತ ರೈತರ ವಿರುದ್ಧ ಎಲ್ಲ ಪ್ರಕರಣಗಳು ಮತ್ತು ನೋಟಿಸುಗಳನ್ನು ಹಿಂದೆಗೆದುಕೊಳ್ಳುವಂತೆ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡರು.
ಆಪ್ ಮತ್ತು ಶಿರೋಮಣಿ ಅಕಾಲಿ ದಳ ಸದಸ್ಯರ ಗೈರುಹಾಜರಿಯಲ್ಲಿ ಅಂಗೀಕಾರಗೊಂಡ ನಿರ್ಣಯವು,ಪರಿಸ್ಥಿತಿಯನ್ನು ಹದಗೆಡಿಸಿರುವ ಮತ್ತು ರೈತರಲ್ಲಿ ಅಶಾಂತಿ ಹಾಗೂ ಆಕ್ರೋಶವನ್ನು ಹೆಚ್ಚಿಸಿರುವ ಕೇಂದ್ರ ಸರಕಾರದ ವಿಚಾರಶೂನ್ಯ ಮತ್ತು ನಿರ್ಲಿಪ್ತ ನಿಲುವಿನ ವಿರುದ್ಧ ಸದಸ್ಯರ ಕಳವಳವನ್ನು ವ್ಯಕ್ತಪಡಿಸಿದೆ.
ರಾಜ್ಯಪಾಲರ ಭಾಷಣಕ್ಕೆ ಉತ್ತರಿಸುತ್ತಿದ್ದ ಸಿಂಗ್,ಪ್ರತಿಭಟನಾನಿರತ ರೈತರನ್ನು ದೇಶವಿರೋಧಿಗಳೆಂದು ಬಣ್ಣಿಸುತ್ತಿರುವುದಕ್ಕಾಗಿ ಬಿಜೆಪಿ ನಾಯಕತ್ವವನ್ನು ತರಾಟೆಗೆತ್ತಿಕೊಂಡರು.
ಪಂಜಾಬಿನ ರೈತರು ಮತ್ತು ಕೃಷಿಕಾರ್ಮಿಕರು ಕಳೆದ ವರ್ಷ ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಷ್ಟೇ ದೇಶಭಕ್ತರು ಮತ್ತು ರಾಷ್ಟ್ರವಾದಿಗಳಾಗಿದ್ದಾರೆ ಎಂದರು.