ಸಿಎಎ ವಿರೋಧಿ ಹೋರಾಟದಲ್ಲಿ ಜೈಲು ಸೇರಿದ್ದ ಅಖಿಲ್ ಗೊಗೊಯಿ ಶಿವಸಾಗರ ಕ್ಷೇತ್ರದಿಂದ ಸ್ಪರ್ಧೆ

ಗುವಾಹಟಿ,ಮಾ.6: ಸಿಎಎ ವಿರೋಧಿ ಪ್ರತಿಭಟನೆ ಪ್ರಕರಣದಲ್ಲಿ ಕಳೆದ ವರ್ಷದಿಂದ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರ ಅಖಿಲ್ ಗೊಗೊಯಿ ಅವರು ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ತಾನು ಹೊಸದಾಗಿ ಸ್ಥಾಪಿಸಿರುವ ರೈಜೊರ ದಲ್‌ನ ಅಭ್ಯರ್ಥಿಯಾಗಿ ಶಿವಸಾಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಪಕ್ಷವು ಶನಿವಾರ ತಿಳಿಸಿದೆ.
ರೈಜೊರ್ ದಲ್ ಮೊದಲ ಹಂತದಲ್ಲಿ 12 ಮತ್ತು ಎರಡನೇ ಹಂತದಲ್ಲಿ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. 17 ಅಭ್ಯರ್ಥಿಗಳ ಪಟ್ಟಿಯನ್ನು ಅದು ಪ್ರಕಟಿಸಿದ್ದು,ಇನ್ನೊಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಿಸಬೇಕಿದೆ.
ಪಟ್ಟಿಯನ್ನು ಪ್ರಕಟಿಸಿದ ರೈಜೊರ ದಲ್‌ನ ಕಾರ್ಯಾಧ್ಯಕ್ಷ ಭಾಸ್ಕೊ ಡೆ ಸೈಕಿಯಾ ಅವರು,ಪಕ್ಷಾಧ್ಯಕ್ಷ ಗೊಗೊಯಿ ಶಿವಸಾಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದರು.
ಬಿಜೆಪಿಯು ಪರಾಭವಗೊಳ್ಳುವಂತೆ ಮತ್ತು ರಾಜ್ಯದಲ್ಲಿ ಸಿಎಎ ವಿರೋಧಿ ಸರಕಾರದ ಸ್ಥಾಪನೆಯಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮತಗಳಲ್ಲಿ ವಿಭಜನೆಯಾಗುವುದನ್ನು ತಪ್ಪಿಸಲು ಕೆಲವೇ ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ ಎಂದರು.





