ಸಿಡಿ ಬಿಡುಗಡೆ ಬಗ್ಗೆ ಹೇಳಿಕೆ: ಮತ್ತೋರ್ವ ಸಾಮಾಜಿಕ ಕಾರ್ಯಕರ್ತನಿಗೆ ನೋಟಿಸ್ ಜಾರಿ

ಬೆಂಗಳೂರು, ಮಾ.6: ರಾಜ್ಯದ ಇನ್ನೂ 19 ರಾಜಕೀಯ ಮುಖಂಡರ ಲೈಂಗಿಕ ಹಗರಣಗಳ ಸಿಡಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂಬ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ಇಲ್ಲಿನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಕಬ್ಬನ್‍ಪಾರ್ಕ್ ಪೊಲೀಸ್ ಠಾಣಾಧಿಕಾರಿಯೊಬ್ಬರು, ಆನ್‍ಲೈನ್ ಮೂಲಕ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ನಾಳೆ(ಮಾ.8)ಬೆಳಗ್ಗೆ 11:30 ಸುಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಬಳ್ಳಾರಿಯಲ್ಲಿ ಮಾತನಾಡಿದ್ದ ರಾಜಶೇಖರ್ ಮುಲಾಲಿ ಅವರು, ವಿವಿಧ ಪಕ್ಷಗಳ ಶಾಸಕರು, ಸಚಿವರು ಮತ್ತು ಸಂಸದರು ಸೇರಿದಂತೆ ಮುಖಂಡರ ಲೈಂಗಿಕ ಹಗರಣಗಳ ಸಿಡಿಗಳನ್ನು ಕೆಲವರು ಸಿದ್ಧಪಡಿಸಿಟ್ಟಿರುವುದು ಗೊತ್ತಾಗಿದೆ. ಅಲ್ಲದೆ, ಎರಡು ದಿನದ ಹಿಂದೆ ಸಿಡಿ ಬಿಡುಗಡೆಯ ನೇತೃತ್ವ ವಹಿಸಬೇಕು ಎಂದು ಕೋರಿ ಒಬ್ಬರು ಕರೆ ಮಾಡಿದ್ದರು. ಸಾಹಿತ್ಯ ಪರಿಷತ್‍ನ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಸಾಧ್ಯವಿಲ್ಲ ಎಂದು ಉತ್ತರಿಸಿದೆ ಎಂದು ಹೇಳಿದ್ದರು.
ಇದನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ಎಂಬುವರು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಸಿಡಿ ಹೇಳಿಕೆ ಕುರಿತು ರಾಜಶೇಖರ್ ಮುಲಾಲಿ ಅವರನ್ನು ವಿಚಾರಣೆಗೊಳಪಡಿಸಿ, ತಪ್ಪಿತಸ್ಥರಾದಲ್ಲಿ ಕ್ರಮ ಜರುಗಿಸುವಂತೆ ಕೋರಿದ್ದರು.
ಇದರನ್ವಯ ಕಬ್ಬನ್‍ಪಾರ್ಕ್ ಠಾಣಾ ಪೊಲೀಸರು ಈಗ ರಾಜಶೇಖರ್ ಮುಲಾಲಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸೋಮವಾರ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ.
ಕಲ್ಲಳ್ಳಿ ವಿರುದ್ಧ ದೂರು: ಅಶ್ಲೀಲ ವಿಡಿಯೊ ಬಿಡುಗಡೆ ಮಾಡಿ ಮಹಿಳೆಯರನ್ನು ಮುಜುಗರಕ್ಕೀಡು ಮಾಡಿರುವ ಆರೋಪ ಸಂಬಂಧ ದಿನೇಶ್ ಕಲ್ಲಳ್ಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮದ್ದೂರು ಮೂಲದ ಮಹಿಳೆಯೊಬ್ಬರು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.







