ಎಪ್ರಿಲ್‌ನಿಂದ ಹೊಸ ಕಾರುಗಳ ಎದುರಿನ ಪ್ರಯಾಣಿಕರ ಸೀಟಿಗೆ ಏರ್ ಬ್ಯಾಗ್ ಕಡ್ಡಾಯ: ಕೇಂದ್ರ ಸರಕಾರ

ಹೊಸದಿಲ್ಲಿ, ಮಾ. 3: ಎಲ್ಲಾ ಕಾರುಗಳ ನೂತನ ಮಾದರಿಗಳಲ್ಲಿ ಎದುರಿನ ಸೀಟಿನ ಪ್ರಯಾಣಿಕರಿಗೆ ಏರ್‌ಬ್ಯಾಗ್ ಒದಗಿಸುವುದು ಎಪ್ರಿಲ್ 1ರಿಂದ ಕಡ್ಡಾಯ. ಆದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಮಾದರಿ ಕಾರುಗಳನ್ನು ಆಗಸ್ಟ್ 31ರಿಂದ ಏರ್ ಬ್ಯಾಗ್ ಅಳವಡಿಸಿಯೇ ಮಾರಾಟ ಮಾಡಬೇಕು.
ಈ ಬಗ್ಗೆ ಗಝೆಟ್ ಅಧಿಸೂಚನೆ ಬಿಡುಗಡೆಗೊಳಿಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ, ಸುರಕ್ಷತೆ ಹಾಗೂ ರಸ್ತೆ ಸುರಕ್ಷತೆಯ ಕುರಿತ ಸುಪ್ರೀಂ ಕೋರ್ಟ್‌ನ ಸಮಿತಿ ನೀಡಿದ ಸಲಹೆಯ ಹಿನ್ನೆಲೆಯಲ್ಲಿ ಏರ್ ಬ್ಯಾಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದೆ.
ಕಾರುಗಳ ಎಲ್ಲಾ ಮಾದರಿಗಳ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದೆ ಏರ್‌ಬ್ಯಾಗ್‌ನಂತಹ ಸುರಕ್ಷಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದರು.
ಎಲ್ಲಾ ಕಾರುಗಳಲ್ಲಿ ಚಾಲಕನಿಗೆ ಏರ್ ಬ್ಯಾಗ್ ಅನ್ನು 2019 ಜುಲೈ 1ರಿಂದ ಕೇಂದ್ರ ಸರಕಾರ ಕಡ್ಡಾಯಗೊಳಿಸಿತ್ತು. ಅಪಘಾತ ಸಂಭವಿಸಿದಾಗ ವಾಹನದ ಎದುರಿನ ಸೀಟಿನಲ್ಲಿ ಕುಳಿತುಕೊಂಡ ಪ್ರಯಾಣಿಕ ತೀವ್ರ ಗಾಯಗೊಳ್ಳುತ್ತಿದ್ದ. ಸಾವು ಕೂಡಾ ಸಂಭವಿಸುತ್ತಿತ್ತು. ಆದುದರಿಂದ ಚಾಲಕನಿಗೆ ಮಾತ್ರ ಏರ್ ಬ್ಯಾಗ್ ಒದಗಿಸಿದರೆ ಸಾಲದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.







