ಯುಎಪಿಎ ಕಾಯ್ದೆಯಡಿ 20 ವರ್ಷಗಳ ಹಿಂದೆ ಬಂಧಿತರಾಗಿದ್ದ 122 ಮಂದಿಯನ್ನು ಖುಲಾಸೆಗೈದ ಗುಜರಾತ್ ನ್ಯಾಯಾಲಯ

ಗಾಂಧಿನಗರ, ಮಾ. 3: ಗುಜರಾತ್ನಲ್ಲಿ ನರೇಂದ್ರ ಮೋದಿ ಸರಕಾರ ಕಠಿಣ ಕಾನೂನು ಬಾಹಿರ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ 2001ರಲ್ಲಿ ಬಂಧಿತರಾಗಿದ್ದ 122 ಮುಸ್ಲಿಮರನ್ನು ಗುಜರಾತ್ ಸೂರತ್ ಜಿಲ್ಲೆಯ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.
20 ವರ್ಷಗಳ ಕಾಲ ನಡೆದ ವಿಚಾರಣೆಯ ಸಂದರ್ಭ ಐವರು ಆರೋಪಿಗಳು ಸಾವನ್ನಪ್ಪಿದ್ದರು.
2001ರ ಡಿಸೆಂಬರ್ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ನಿಷೇಧಿತ ವಿದ್ಯಾರ್ಥಿ ಸಂಘಟನೆ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ಯ ಸದಸ್ಯರಾಗಿ ಪಾಲ್ಗೊಂಡ ಆರೋಪವನ್ನು ಇವರು ಎದುರಿಸುತ್ತಿದ್ದರು.
ನಿಷೇಧಿತ ಸಂಘಟನೆ ಸಿಮಿಯ ಸದಸ್ಯರಾಗಿದ್ದುದಕ್ಕೆ ಬಂಧಿತರಾಗಿದ್ದ 122 ಮಂದಿಯನ್ನು ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಎ.ಎನ್. ದವೆ ಖುಲಾಸೆಗೊಳಿಸಿದ್ದಾರೆ. ಆರೋಪಿಗಳು ಸಿಮಿ ಸಂಘಟನೆಗೆ ಸೇರಿದವರು ಎಂದು ಸಾಬೀತುಪಡಿಸುವ ಸೂಕ್ಷ್ಮ, ನಂಬಿಕಾರ್ಹ ಹಾಗೂ ತೃಪ್ತಿಕರ ಪುರಾವೆಗಳನ್ನು ಸಲ್ಲಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಭಯೋತ್ಪಾದನೆ ವಿರೋಧಿ ಕಾಯ್ದೆ ಅಡಿಯಲ್ಲಿ 20 ವರ್ಷಗಳ ಹಿಂದೆ ಬಂಧಿತರಾದವರು ತಪ್ಪಿತಸ್ಥರು ಎಂದು ಹೇಳಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಾಂಗ ದಂಡಾಧಿಕಾರಿ ದವೆ ಹೇಳಿದ್ದಾರೆ.
ಭಯೋತ್ಪಾದನೆಯ ಆರೋಪಕ್ಕೆ ಒಳಗಾದವರು ಗುಜರಾತ್, ತಮಿಳುನಾಡು, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಬಿಹಾರ್ನಿಂದ ಆಗಮಿಸಿದ್ದರು. ಸಿಮಿಯೊಂದಿಗೆ ನಂಟು ಹೊಂದಿರುವುದನ್ನು ಅವರು ನಿರಾಕರಿಸಿದ್ದರು. ಅಖಿಲ ಭಾರತ ಅಲ್ಪಸಂಖ್ಯಾತರ ಶಿಕ್ಷಣ ಮಂಡಳಿ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ತಾವು ಸೂರತ್ನಲ್ಲಿ ಇದ್ದೆವು ಎಂದು ಅವರು ತಿಳಿಸಿದ್ದರು.







