ಪ್ರಧಾನಿ ರ‍್ಯಾಲಿಯ ದಿನವೇ ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡ ಮಮತಾ ಬ್ಯಾನರ್ಜಿ

ಹೊಸದಿಲ್ಲಿ: ಪಶ್ಚಿಮಬಂಗಾಳದಲ್ಲಿ 8 ಹಂತಗಳ ವಿಧಾನಸಭಾ ಚುನಾವಣೆ ಆರಂಭಕ್ಕೆ ಮುಂಚಿತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೋಲ್ಕತಾದಲ್ಲಿ ರವಿವಾರ ಮೊತ್ತ ಮೊದಲ ಬಾರಿ ರ‍್ಯಾಲಿ ನಡೆಸಲಿದ್ದು, ಇದೇ ದಿನ ಸಿಲಿಗುರಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡುಗೆ ಅನಿಲ ಸಿಲಿಂಡರ್ ಸಹಿತ ಇಂಧನ ದರ ಏರಿಕೆಯನ್ನು ಖಂಡಿಸಿ ಪಾದಯಾತ್ರೆ ನಡೆಸಲಿದ್ದಾರೆ.
ಸಾವಿರಾರು ಜನರು ಅತ್ಯಂತ ಮುಖ್ಯವಾಗಿ ಮಹಿಳೆಯರು ಡಾರ್ಜಿಲಿಂಗ್ ನಲ್ಲಿ ಒಟ್ಟಗೆ ಸೇರಿ ಮೆರವಣಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ.
“ದೊಡ್ಡ ದ್ವನಿ ಎತ್ತಬೇಕಾದರೆ ನಾವು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ. ಪ್ರತಿಭಟನೆಯ ಸಂಕೇತವಾಗಿ ರ್ಯಾಲಿಯಲ್ಲಿ ಭಾವಹಿಸುವವರು ಖಾಲಿ ಸಿಲಿಂಡರ್ ನ್ನು ಹೊತ್ತು ತರಲಿದ್ದಾರೆ'' ಎಂದು ಕೋಲ್ಕತಾದಿಂದ ಶನಿವಾರ ಸಿಲಿಗುರಿಗೆ ಬಂದಿರುವ ಮಮತಾ ಸುದ್ದಿಗಾರರಿಗೆ ತಿಳಿಸಿದರು.
ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ರ್ಯಾಲಿಯಲ್ಲಿ ಪಾಲ್ಗೊಳ್ಲಲಿದ್ದಾರೆ.
“ಸೀಮೆಎಣ್ಣೆ ಸಿಗುತ್ತಿಲ್ಲ. ಬಂಗಾಳದ 1 ಕೋಟಿ ಜನರು ಇದನ್ನು ಬಳಸುತ್ತಾರೆ. ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ. ಸಿಲಿಂಡರ್ ಗ್ಯಾಸ್ ಕಳೆದ ರಾತ್ರಿ ಕೂಡ ಹೆಚ್ಚಳವಾಗಿದೆ. ಹೀಗಾಗಿ ನಾನು ನನ್ನ ಕೆಲಸಕ್ಕೆ ಸ್ಕೂಟರ್ ಬಳಸಲು ನಿರ್ಧರಿಸಿದ್ದೇನೆ. ಮೋದಿ ಈ ದೇಶವನ್ನು ಮಾರುತ್ತಿದ್ದಾರೆ. ಈ ಸರಕಾರ ಜನ ವಿರೋಧಿ, ಮಹಿಳಾ ವಿರೋಧಿ, ರೈತರ ವಿರೋಧಿ ಹಾಗೂ ಯುವ ಜನರ ವಿರೋಧಿಯಾಗಿದೆ. ನಾವು ಈ ಸರಕಾರವನ್ನು ಕಿತ್ತೊಗೆಯಲು ಬಯಸಿದ್ದೇವೆ'' ಎಂದು ಮಮತಾ ಹೇಳಿದರು.







