ಜಾರ್ಜ್ ಫ್ಲಾಯ್ಡ್ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಧರಣಿ

ಫೈಲ್ ಚಿತ್ರ
ಮಿನಪೊಲಿಸ್ (ಅಮೆರಿಕ), ಮಾ. 8: ಆಫ್ರಿಕ ಮೂಲದ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ರನ್ನು ಹತ್ಯೆಗೈದ ಆರೋಪವನ್ನು ಎದುರಿಸುತ್ತಿರುವ ಬಿಳಿಯ ಪೊಲೀಸ್ ಅಧಿಕಾರಿಯ ವಿಚಾರಣೆ ಆರಂಭಗೊಳ್ಳುವ ಮುನ್ನಾ ದಿನವಾದ ರವಿವಾರ ಸಾವಿರಾರು ಮಂದಿ ಅಮೆರಿಕದ ನಗರ ಮಿನಪೊಲಿಸ್ನಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಕೆಂಪು ಗುಲಾಬಿಗಳಿಂದ ಆವರಿಸಲ್ಪಟ್ಟಿರುವ ಶವಪೆಟ್ಟಿಗೆಯ ಮಾದರಿಯನ್ನು ಜನರು ಮೆರವಣಿಗೆಯಲ್ಲಿ ಹೊತ್ತು ಸಾಗಿದರು.
ಮೆರವಣಿಗೆಯಲ್ಲಿ ಎಲ್ಲ ಸಮುದಾಯಗಳ ಜನರು ಭಾಗವಹಿಸಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಮೌನವಾಗಿ ಸಾಗಿದ ಜನರು, ಆಗಾಗ ‘‘ನ್ಯಾಯವಿಲ್ಲದೆ, ಶಾಂತಿಯಿಲ್ಲ’’ ಎಂಬ ಘೋಷಣೆಗಳನ್ನು ಕೂಗಿದರು.
20 ಡಾಲರ್ನ ಕಳ್ಳನೋಟನ್ನು ಚಲಾಯಿಸಿದ ಆರೋಪದಲ್ಲಿ 46 ವರ್ಷದ ಫ್ಲಾಯ್ಡ್ ರನ್ನು ಕಳೆದ ವರ್ಷದ ಮೇ 25ರಂದು ಪೊಲೀಸರು ಬಂಧಿಸುತ್ತಿದ್ದಾಗ ಅವರ ಸಾವು ಸಂಭವಿಸಿದೆ. ಫ್ಲಾಯ್ಡ್ ರನ್ನು ನೆಲಕ್ಕೆ ಕೆಡವಿದ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್, ಬಳಿಕ ಅವರ ಕುತ್ತಿಗೆಯ ಮೇಲೆ ಮೊಣಕಾಲೂರಿ ಕುಳಿತರು. ಆಗ ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟರು.
ಈ ಸಾವಿನ ವಿರುದ್ಧ ಅಮೆರಿಕ ಹಾಗೂ ಜಗತ್ತಿನಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ.