ಸಿಡಿ ಬಿಡುಗಡೆ ಹಿಂದೆ ಮಹಾನ್ ನಾಯಕನೋರ್ವನ ಷಡ್ಯಂತ್ರ: ರಮೇಶ್ ಜಾರಕಿಹೊಳಿ
''ಯುವತಿಗೆ 50 ಲಕ್ಷವಲ್ಲ, 5 ಕೋಟಿ ರೂ. ನೀಡಿದ್ದಾರೆ''

ಬೆಂಗಳೂರು, ಮಾ.9: ಲೈಂಗಿಕ ಹಗರದ ಸಿಡಿ ಬಿಡುಗಡೆ ಹಿಂದೆ ಮಹಾನ್ ನಾಯಕನೋರ್ವನ ಷಡ್ಯಂತ್ರ ಇರುವ ಸಾಧ್ಯತೆ ಇದ್ದು, ಅವರನ್ನು ಜೈಲಿಗೆ ಕಳುಹಿಸುವವರೆಗೂ ಬಿಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಇಲ್ಲಿನ ಸದಾಶಿವನಗರದ ಸ್ವಗೃಹದಲ್ಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ವರ್ಷದಲ್ಲಿ ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ನಾನು ಮೂರು ತಿಂಗಳ ಕಾಲ ಇಲಾಖೆ ನಿರ್ವಹಿಸಲಾಗುವುದಿಲ್ಲ ಎಂದು ಓರ್ವ ಮಹಾನ್ ನಾಯಕ ನನಗೆ ಶರತ್ತು ಹಾಕಿದ್ದ. ಆತನೇ ಷಡ್ಯಂತ್ರ ನಡೆಸಿರುವ ಸಾಧ್ಯತೆಯಿದ್ದು, ಆತನ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.
ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ. ಏನೇನು ಆಗುತ್ತೆ ಎಂದು ಸುಮ್ಮನಿದ್ದು, ನಾಲ್ಕೈದು ದಿನಗಳ ಕಾಲ ಗಮನಿಸಿದ್ದೇನೆ. ಅಲ್ಲದೆ, 26 ಗಂಟೆ ಮೊದಲು ನನಗೆ ಹೈಕಮಾಂಡ್‍ನಿಂದ ಸಿಡಿ ಬಿಡುಗಡೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಧೈರ್ಯದಲ್ಲಿರುವಂತೆ ಸೂಚಿಸಿದ್ದರು ಎಂದು ಹೇಳಿದರು.
ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ ಎಂದ ಅವರು, ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನನಗೆ ಧೈರ್ಯ ತುಂಬಿದೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
20 ಕೋಟಿ ರೂ. ಖರ್ಚು: ಸಿಡಿಗೆ 20 ಕೋಟಿ ಖರ್ಚು ಮಾಡಲಾಗಿದೆ. ಯಶವಂತಪುರ ಮತ್ತು ಹುಳಿಮಾವು ಎರಡು ಕಡೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ ಅವರು, ಯುವತಿಗೆ 50 ಲಕ್ಷವಲ್ಲ, 5 ಕೋಟಿ ನೀಡಿದ್ದಾರೆ. ವಿದೇಶದಲ್ಲಿ ಎರಡು ಫ್ಲ್ಯಾಟ್ ಕೊಡಿಸಿರುವ ಮಾಹಿತಿ ಇದೆ, ಸಿಡಿ ಮಾಡಲು ನೂರಾರು ಕೋಟಿ ಖರ್ಚು ಆಗಿದೆ ಎಂದು ಹೇಳಿದರು.
ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಓರಾಯನ್ ಮಾಲ್ ಬಳಿಯ 4, 5 ನೆ ಮಹಡಿಯ ಫ್ಲ್ಯಾಟ್‍ನಲ್ಲಿ ಷಡ್ಯಂತ್ರ ನಡೆದಿದೆ. ರಾಜಕೀಯ ಏಳಿಗೆ ಸಹಿಸದೆ ಈ ಸಂಚು ನಡೆಸಲಾಗಿದೆ. ಈ ಸಿಡಿ ಬಗ್ಗೆ 4 ತಿಂಗಳ ಹಿಂದೆಯೇ ಷಡ್ಯಂತ್ರ ಮಾಡಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಯಾವುದೇ ಕಾರಣಕ್ಕೂ, ಎಷ್ಟೇ ಪ್ರಭಾವಿಗಳಾದರೂ ಬಿಡಲ್ಲ ಎಂದು ರಮೇಶ್ ಸವಾಲು ಹಾಕಿದರು.
ಶೇ.100 ರಷ್ಟು ನಕಲಿ
ವೈರಲ್ ಸಿಡಿ ಶೇ.100ರಷ್ಟು ನಕಲಿಯಾಗಿದ್ದು, ನಾನು ಅಪರಾಧಿಯಲ್ಲ, ನಿರಪರಾಧಿ. ಅಲ್ಲದೆ, ನನಗೆ ಕುಟುಂಬದ ಗೌರವ ಮುಖ್ಯ. ರಾಜಕಾರಣಿಯಾಗಿ ಇರಲು ಆಸಕ್ತಿ ಇಲ್ಲ. ರಾಜಮನೆತನ ನನ್ನದು. ಈ ರೀತಿ ಮಾಡಿದವರನ್ನು ಜೈಲಿಗೆ ಹಾಕಿಸದೆ ಬಿಡಲ್ಲ.
-ರಮೇಶ್ ಜಾರಕಿಹೊಳಿ, ಮಾಜಿ ಸಚಿವ







