ದಿಲ್ಲಿಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್-19 ಲಸಿಕೆ: ಮನೀಷ್ ಸಿಸೋಡಿಯಾ

ಹೊಸದಿಲ್ಲಿ: ದಿಲ್ಲಿಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆಗಳು ದಿಲ್ಲಿಯ ಜನತೆಗೆ ಉಚಿತವಾಗಿ ಲಭ್ಯವಾಗಲಿದೆ ಎಂದು ಕೇಂದ್ರಾಡಳಿತ ಪ್ರದೇಶದ 7ನೇ ಬಜೆಟ್ ಮಂಡಿಸಿರುವ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಂಗಳವಾರ ತಿಳಿಸಿದ್ದಾರೆ.
“ಉಚಿತ ಲಸಿಕೆಗಾಗಿ ದಿಲ್ಲಿ ಸರಕಾರವು 50 ಕೋ.ರೂ. ಮಂಜೂರು ಮಾಡಿದೆ. ಶೀಘ್ರವೇ ಪ್ರತಿದಿನದ ಲಸಿಕೆಯ ಪ್ರಮಾಣವನ್ನು 45,000ದಿಂದ 60,000ಕ್ಕೆ ಏರಿಸಲಾಗುವುದು ಎಂದು ವಿಧಾನಸಭೆಯಲ್ಲಿ ಸಿಸೋಡಿಯಾ ತಿಳಿಸಿದರು.
ಸಿಸೋಡಿಯಾ ಅವರು ದಿಲ್ಲಿಯ ವಿಧಾನಸಭೆಯಲ್ಲಿ ಮೊದಲ ಬಾರಿ ಪೇಪರ್ ರಹಿತ ಬಜೆಟನ್ನು ಮಂಡಿಸಿದರು.
ದಿಲ್ಲಿ ಸರಕಾರ ನಡೆಸುತ್ತಿರುವ 52 ಆಸ್ಪತ್ರೆ ಸಹಿತ ಸದ್ಯ ದಿಲ್ಲಿಯ 192 ಆಸ್ಪತೆಯಲ್ಲಿ ಲಸಿಕೆ ನೀಡಲಾಗುತ್ತಿದೆ. 60 ವರ್ಷಕ್ಕಿಂತ ಮೇಲಿನ ಹಾಗೂ ಇತರ ಕಾಯಿಲೆಗಳಿರುವ 45ರಿಂದ 59ರ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ.
ಮುಂದಿನ ಹಂತದ ಲಸಿಕೆ ಅಭಿಯಾನದಲ್ಲಿ ಸಾಮಾನ್ಯ ಜನರಿಗೆ ಲಸಿಕೆ ನೀಡಲಾಗುವುದು. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಸೌಲಭ್ಯವನ್ನು ನೀಡುವ ಕುರಿತಾಗಿ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾವಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಹಿಂದೆಯೇ ಹೇಳಿದ್ದರು.





