ಮಂಡ್ಯ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡುವ ಕುರಿತು ಸಭೆ ನಡೆಸಿ ಅಂತಿಮ ನಿರ್ಧಾರ: ಯಡಿಯೂರಪ್ಪ

ಬೆಂಗಳೂರು, ಮಾ.9: ಮಂಡ್ಯ ಸಕ್ಕರೆ ಕಾರ್ಖಾನೆಗೆ ಸರಕಾರ 200 ಕೋಟಿ ಅನುದಾನ ನೀಡಿದ್ದರೂ ನಿರಂತರವಾಗಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಲೇ ಬಂದಿದೆ. ಹೀಗಾಗಿಯೆ, ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ, ಮತ್ತೊಮ್ಮೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಹಿಂದೆ ನಾನೇ ಹಣ ನೀಡಿದ್ದೆ. ಕಬ್ಬು ಅರಿಯುವ ಮಾತುಕತೆಯಾಗಿತ್ತು. ಅಲ್ಲಿನ ಗುಂಪುಗಾರಿಕೆಯಿಂದಾಗ ಕಾರ್ಖಾನೆ ಆರಂಭಿಸಲಾಗುತ್ತಿಲ್ಲ. ಆದರೂ ಸದಸ್ಯರ ಮನವಿಯಂತೆ ಮತ್ತೊಮ್ಮೆ ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ನಷ್ಟವನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಈಗ ಆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದ್ದು, ನವೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿರುವುದು ಸರಿಯಲ್ಲ. ಈ ಕಾರ್ಖಾನೆಯನ್ನು ಸರಕಾರವೆ ಜವಾಬ್ದಾರಿ ತೆಗೆದುಕೊಂಡು ನಡೆಸಬೇಕೆಂದು ಒತ್ತಾಯಿಸಿದರು.
ವಿಧಾನಸೌಧವನ್ನೇ ಬಾಡಿಗೆಗೆ ನೀಡುತ್ತೀರ?
ನಷ್ಟ ಉಂಟಾಗುತ್ತಿದೆ ಎಂದು ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಅವರಿಗೆ ಗುತ್ತಿಗೆ ನೀಡಿದ್ದೀರಿ? ಮುಂದಿನ ದಿನಗಳಲ್ಲಿ ಸರಕಾರ ಸಾಲದಲ್ಲಿ ಇದೆ ಎಂದು ವಿಧಾನಸೌಧವನ್ನೇ ಬಾಡಿಗೆಗೆ ನೀಡುತ್ತೀರಾ?
-ಎಸ್.ಆರ್. ಪಾಟೀಲ್, ವಿರೋದ ಪಕ್ಷದ ನಾಯಕ







