ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ: ಪರೀಕ್ಷಾ ಒತ್ತಡದಿಂದ ಸಾವಿಗೆ ಶರಣಾಗಿರುವ ಶಂಕೆ

ಬೆಂಗಳೂರು, ಮಾ.9: ವೈದ್ಯಕೀಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು ಮೂಲದ ನವೀನ್(20) ಮೃತ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಬಿಬಿಎಸ್ ಪರೀಕ್ಷೆಯನ್ನು ನವೀನ್ ಬರೆಯಬೇಕಿತ್ತು. ಆದರೆ, ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ನವೀನ್ ಮೆರಿಟ್‍ನಲ್ಲಿ ಎಂಬಿಬಿಎಸ್ ಸೀಟ್ ಸಂಪಾದಿಸಿ 2ನೆ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಅಂತೆಯೇ ಹಾಸ್ಟೆಲ್‍ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ಸ್ನೇಹಿತರ ಜೊತೆ ಊಟ ಮುಗಿಸಿ, ಬಳಿಕ ಹಾಸ್ಟೆಲ್‍ನ ತನ್ನ ಕೊಠಡಿಗೆ ತೆರಳಿದ್ದಾನೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ನವೀನ್ ಸ್ನೇಹಿತ ಕೊಠಡಿ ಬಳಿ ಬಂದು ಬಾಗಿಲು ಬಡಿದಿದ್ದಾನೆ. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಸ್ನೇಹಿತರು ಬಾಗಿಲು ಒಡೆದು ಒಳಹೋಗಿ ನೋಡಿದಾಗ ನವೀನ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ನವೀನ್ ಮೃತಪಟ್ಟ ಕೊಠಡಿಯಲ್ಲಿ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಆತನ ಮೊಬೈಲ್ ಪರಿಶೀಲಿಸಿದಾಗ ನಾಲ್ಕು ದಿನಗಳ ಹಿಂದೆ ಆನ್‍ಲೈನ್‍ನಲ್ಲಿ ಒತ್ತಡ ನಿವಾರಣೆ ಹಾಗೂ ಆತ್ಮಹತ್ಯೆ ಮಾರ್ಗಗಳ ಕುರಿತು ಹುಡುಕಾಟ ಮಾಡಿರುವುದು ಗೊತ್ತಾಗಿದೆ. ಪರೀಕ್ಷಾ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಈ ಸಂಬಂಧ ವಿವಿಪುರಂ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.







