ಗಂಜಿಮಠ : ಮರಾಠಿ ಸಮಾಜ ಸೇವಾ ಸಂಘದಿಂದ ವಿವಿಧ ಕಾರ್ಯಕ್ರಮ

ಗುರುಪುರ, ಮಾ.9: ಸಮಾಜದ ಸಂಘಟನೆಯ ಪ್ರಮುಖರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದರೆ ಸರಕಾರ ಗೊತ್ತುಪಡಿಸಿದ ಮೀಸಲಾತಿಯ ಲಾಭ ಪಡೆಯಲು ಕಷ್ಟವೇನಿಲ್ಲ. ಛಲದಿಂದ ಅಂತಹ ಕೆಲಸ ಮಾಡಿದರೆ ಒಂದು ಸಮಾಜ ಖಂಡಿತವಾಗಿಯೂ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲಿದೆ. ಸರಕಾರದಿಂದ ಮರಾಠಿ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಒದಗಿಸಲು ಪ್ರಯತ್ನಿಸುವೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ರವವಾರ ಗಂಜಿಮಠ ಜಂಕ್ಷನ್‌ನ ಮರಾಠಿ ಸಮಾಜ ಸೇವಾ ಮಂದಿರದ ಬಳಿ ಆಯೋಜಿಸಲಾದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಛತ್ರಪತಿ ಶಿವಾಜಿ ಯಂತಿ, ನೂತನ ಪದಾಧಿಕಾರಿಗಳ ಪದಗ್ರಹಣ, ಯಕ್ಷ-ಗಾನ-ವೈಭವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಎಸ್ಸೆನ್ನೆಲ್ ನಿವೃತ್ತ ಡಿಜಿಎಂ ರಾಮ ನಾಕ್ ಆಶಯ ಭಾಷಣ ಮಾಡಿದರು. ಸಂಘದ ನೂತನ ಅಧ್ಯಕ್ಷ, ದೈಹಿಕ-ಯೋಗ ಶಿಕ್ಷಕ ಶೇಖರ ಕಡ್ತಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಜನಾರ್ದನ ಗೌಡ, ತಾಪಂ ಸದಸ್ಯ ಸುನಿಲ್ ಗಂಜಿಮಠ ಮಾತನಾಡಿದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಹೆಡ್-ಕಾನ್‌ಸ್ಟೇಬಲ್ ವೆಂಕಟೇಶ್ ನಾಕ್, ಸತತ 5 ಬಾರಿ ಗಂಜಿಮಠ ಗ್ರಾಪಂ ಸದಸ್ಯೆ ಯಾಗಿ ಆಯ್ಕೆಯಾಗಿ ಪ್ರಸಕ್ತ ಉಪಾಧ್ಯಕ್ಷೆಯಾಗಿರುವ ಕುಮುದಾ ನಾಕ್, ಸಂಘದ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಡಿ, ನಾಕ್ ಹಾಗೂ ಎಸೆಸ್ಸೆಲ್ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೇಯಾ ಬಿ.ಆರ್. ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸ್ಥಳೀಯ ಗ್ರಾಪಂಗಳಿಗೆ ಆಯ್ಕೆಯಾದ ಸಮಾಜದ ಸದಸ್ಯರನ್ನು ಅಭಿನಂದಿಸಲಾಯಿತು.
ಅಶಕ್ತ ಯುವಕಗೆ ನೆರವು : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುಂದೋಡಿ ಸತೀಶ್ ನಾಕ್‌ರಿಗೆ ಸಂಘದ ವತಿಯಿಂದ 1 ಲಕ್ಷ ರೂ. ನೆರವು ನೀಡಲಾಯಿತು. ಗುರುಪುರ ಜಿಪಂ ಸದಸ್ಯ ಯುಪಿ ಇಬ್ರಾಹಿಂ ನೆರವಿನ ಚೆಕ್ ವಿತರಿಸಿದರು.
ಎಡಪದವು ಗ್ರಾಪಂ ಅಧ್ಯಕ್ಷ ಸುಕುಮಾರ್ ದೇವಾಡಿಗ, ಸದಸ್ಯ ರುಕ್ಮಯ್ಯ ನಾಕ್, ಕೋಶಾಧಿಕಾರಿ ಸುಲತಾ ಎಸ್, ಮಹಿಳಾ ಘಟಕ ಅಧ್ಯಕ್ಷೆ ಸವಿತಾ ಒಡ್ಡೂರು ಉಪಸ್ಥಿತರಿದ್ದರು. ವಿ. ಪದ್ಮನಾಭ ನಾಕ್ ಸ್ವಾಗತಿಸಿದರು. ಶ್ರಾವ್ಯಾ, ನಿರೀಕ್ಷಿತಾ, ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಶೋಕ್ ನಾಯಕ್ ವಂದಿಸಿದರು.







