ಕೊಲ್ಲೂರು ದೇವಸ್ಥಾನದಲ್ಲಿ 21.80 ಕೋಟಿ ರೂ. ಅವ್ಯವಹಾರ: ಕರ್ನಾಟಕ ದೇವಸ್ಥಾನ -ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರೋಪ

ಉಡುಪಿ, ಮಾ. 9: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯಿಂದ 21.80 ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಾ ಸಂಘದ ರಾಜ್ಯ ವಕ್ತಾರ ಗುರು ಪ್ರಸಾದ ಗೌಡ, ದೇಣಿಗೆ ರೂಪದಲ್ಲಿ ದೊರೆತ ಚಿನ್ನ, ಬೆಳ್ಳಿ ಆಭರಣಗಳನ್ನು ನಿಯಮಾನುಸಾರ ನೋಂದಣಿ ಮಾಡಿ ಇಟ್ಟಿಲ್ಲ. ಅದೇ ರೀತಿ 2018-19ರಲ್ಲಿ ಇಂತಹ ದೇಣಿಗೆ ಸ್ವೀಕರಿಸಿದ ಆಭರಣಗಳ ಪಟ್ಟಿಯನ್ನು ಸರಕಾರಿ ಲೆಕ್ಕಪರಿಶೋಧಕರಿಗೆ ಸಲ್ಲಿಸಿಲ್ಲ ಎಂದು ದೂರಿದರು.
ನಕಲಿ ಸಿಬ್ಬಂದಿಗಳನ್ನು ತೋರಿಸಿ ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿರುವುದು ಕಂಡುಬಂದಿದೆ. ದೇವಸ್ಥಾನದ ಸಿಬ್ಬಂದಿಗಳ ಭವಿಷ್ಯ ನಿಧಿಯನ್ನು ನೋಂದಾಯಿತ ಭವಿಷ್ಯ ನಿಧಿ ಆಯುಕ್ತರಲ್ಲಿ ಜಮೆ ಮಾಡಿಲ್ಲ. ಈ ಕಾರಣದಿಂದ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳ ಮೇಲೆ 7,46,355ರೂ. ದಂಡ ಮೊತ್ತ ವನ್ನು ವಸೂಲಿ ಮಾಡಲಾಗಿದೆ. ಈ ಮೊತ್ತವನ್ನು ಅಧಿಕಾರಿಯ ಸಂಬಳದಿಂದ ವಸೂಲಿ ಮಾಡುವ ಬದಲು ಭಕ್ತರ ದೇಣಿಗೆಯಿಂದ ನೀಡಲಾಗಿದೆ ಎಂದು ಅವರು ಆರೋಪಿಸಿದರು.
2004ರಲ್ಲಿ ದೇವಸ್ಥಾನದಿಂದ ನೀಡಲಾದ ಒಟ್ಟು 2.41ಕೋಟಿ ರೂ. ಮುಂಗಡ ಮೊತ್ತ ಮರುಪಾವತಿಯಾಗದೆ ಬಾಕಿ ಉಳಿದಿದ್ದು, 2018-19ರಲ್ಲಿ ಅದು 2.83ಕೋಟಿ ರೂ.ಗೆ ಹೆಚ್ಚಳ ಆಗಿದೆ. ನಿಯಮಾನುಸಾರ ಪರವಾನಿಗೆ ಯನ್ನು ಪಡೆಯದೇ ದೇವಸ್ಥಾನದ ಹಣದಿಂದ ಈ ಮುಂಗಡ ಮೊತ್ತವನ್ನು ನೀಡುವುದು ಕಾನೂನು ಬಾಹಿರವಾಗಿದೆ. ದೇವಸ್ಥಾನದ ಅನೇಕ ಜಮೀನು ಗಳನ್ನು ಕೂಡ ಅತ್ರಿಕ್ರಮಣ ಮಾಡಲಾಗಿದೆ. ದೇವಸ್ಥಾನದ ಆಸ್ತಿಪಾಸ್ತಿಗಳ ಸರಿಯಾಗಿ ನೋಂದಾಣಿ ಮಾಡಿಕೊಂಡಿಲ್ಲ ಎಂದು ಅವರು ದೂರಿದರು.
ಹೀಗೆ ಲೆಕ್ಕಪರಿಶೋಧಕರು ದೇವಸ್ಥಾನದ ವ್ಯವಹಾರದಲ್ಲಿ 21.80ಕೋಟಿ ರೂ. ಗಳ ಆರ್ಥಿಕ ಅವ್ಯವಹಾರ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ದೊರಕಿದ ದಾಖಲೆಯ ಆಧಾರದಲ್ಲಿ ಈ ಅವ್ಯವಹಾರ ಬಯಲಾಗಿದೆ. ಆದುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಿ, ಅವರಿಂದಲೇ ಅವ್ಯವಹಾರದ ಹಣವನ್ನು ವಸೂಲಿ ಮಾಡಬೇಕು. ಇಲ್ಲದಿದ್ದರೆ ಇದರ ವಿರುದ್ಧ ರಾಜ್ಯವ್ಯಾಪಿ ಆಂದೋಲನ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಂಘದ ಮಹಾರಾಷ್ಟ್ರ ವಕ್ತಾರ ಸುನೀಲ್ ಘನ ವಟ್, ಕರ್ನಾಟಕ ಸದಸ್ಯರಾದ ಪ್ರಭಾಕರ ನಾಯಕ್, ಶ್ರೀನಿವಾಸ, ಚಂದ್ರ ಮೊಗೇರ, ಮಧುಸೂದನ್ ಅಯ್ಯರ್ ಉಪಸ್ಥಿತರಿದ್ದರು.
ಡಿಸಿ ನಿವಾಸದ ಫೋನ್ ಬಿಲ್ ಪಾವತಿ!
2018-19ರಲ್ಲಿ ಉಡುಪಿ ಜಿಲ್ಲಾಧಿಕಾರಿಯ ಮನೆಯ ಟೆಲಿಫೋನ್ ಬಿಲ್ 22,363 ರೂ.ವನ್ನು ಕೊಲ್ಲೂರು ದೇವಳದ ಹಣದಿಂದ ಪಾವತಿಸಲಾಗಿದೆ ಎಂದು ಗುರುಪ್ರಸಾದ್ ಗೌಡ ಆರೋಪಿಸಿದರು.
ಸರಕಾರಿ ಅಧಿಕಾರಿಗಳು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದು ಕೊಲ್ಲೂರು ದೇವಳದ ಆಡಳಿತ ಮಂಡಳಿಯ ಅವ್ಯವಹಾರ ದಿಂದ ಸ್ಪಷ್ಟವಾಗಿದೆ. ಆದುದರಿಂದ ರಾಜ್ಯದಲ್ಲಿ ಸರಕಾರೀಕರಣಗೊಳಿಸಲಾದ 32,000 ದೇವಸ್ಥಾನಗಳನ್ನು ಭಕ್ತರ ವಶಕ್ಕೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.







