ಕೌಟಂಬಿಕ ಹಿಂಸೆ, ವಿಚ್ಛೇಧನಗಳ ಸಂಖ್ಯೆ ಹೆಚ್ಚಳ: ನ್ಯಾಯಾಧೀಶೆ ಕಾವೇರಿ

ಉಡುಪಿ, ಮಾ.9: ಕೋವಿಡ್ ಸಂದರ್ಭದಲ್ಲಿ ಕೌಟಂಬಿಕ ಹಿಂಸೆ ಹಾಗೂ ವಿವಾಹ ವಿಚ್ಛೇಧನಗಳ ಸಂಖ್ಯೆ ಹೆಚ್ಚಾಗಿವೆ. ನಮ್ಮ ಜವಾಬ್ದಾರಿಗಳನ್ನು ಅರಿಯ ಬೇಕು. ಕೇವಲ ಆಕಾಂಕ್ಷೆ ಸಾಲದು, ಶ್ರಮ ಬೇಕು. ಶಿಸ್ತಿಗೆ ಆದ್ಯತೆ ನೀಡಬೇಕು. ಪ್ರೀತಿ, ಕರುಣೆ, ವಿಶ್ವಾಸ, ಒಳ್ಳೆಯ ಅರಿವು ಮತ್ತು ಸಂಯಮ ತ್ಯಾಗಗಳಿದ್ದರೆ ಆದರ್ಶ ಕುಟುಂಬವಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶೆ ಕಾವೇರಿ ತಿಳಿಸಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಸ್ಥಾನೀಯ ಘಟಕದ ವತಿಯಿಂದ ‘ಸುದೃಢ ಕುಟುಂಬ, ಸುಭದ್ರ ಸಮಾಜ’ ಎಂಬ ಅಭಿಯಾನದ ಪ್ರಯುಕ್ತ ಮಾ.7ರಂದು ಉಡುಪಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾದ ವಿಚಾರಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ನ್ಯಾಯವಾದಿ ಹಾಗೂ ನೋಟರಿ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ಮಾತನಾಡಿ, ವೈವಾಹಿಕ ಜೀವನವು ವ್ಯಾಪಕವಾಗಿ ವಿಫಲವಾಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಧಾರ್ಮಿಕ ಮೌಲ್ಯಗಳತ್ತ ಮರಳಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಕರ್ನಾಟಕ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ, ಮನೆಯಲ್ಲಿ ಸಾಮರಸ್ಯ ಇದ್ದರೆ ಸಮಾಜ ಶಾಂತಿಯ ಕೇಂದ್ರವಾಗುತ್ತದೆ. ಇದರಿಂದ ದೇಶ ಸಮೃದ್ಧಿಯಾಗಲು ಸಾಧ್ಯ ವಾಗುತ್ತದೆ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಚೇತನ್ ಲೋಬೊ, ಉಡುಪಿ ಮಹಿಳಾ ಪೊಲಿಸ್ ಠಾಣೆಯ ಎಸ್ಸೈ ವಯಲೆಟ್ ಫೆಮಿನಾ, ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿದರು.







