ಸ್ವ ಉದ್ಯೋಗ, ಸ್ವಾವಲಂಬಿ ಬದುಕಿಗಾಗಿ ಸವಿತಾ ಸೀಧನ್ ಸಾಲ ವಿತರಣೆ
ಉಡುಪಿ, ಮಾ.9: ಸ್ವಸಹಾಯ ಗುಂಪುಗಳಿಗೆ ಸ್ವಉದ್ಯೋಗ/ಗುಂಪು ಸಾಲ ಹಾಗೂ ಆರ್ಥಿಕ ಪುನರ್‌ಶ್ಚೇತನಗೊಳಿಸುವ ನಿಟ್ಟಿನಲ್ಲಿ ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸವಿತಾ ಸಮಾಜ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಕಾರದೊಂದಿಗೆ ಸವಿತಾ ಸೀಧನ್ ಸಾಲ ವಿತರಣಾ ಯೋಜನೆಯನ್ನು ಹಮ್ಮಿಕೊಂಡಿದೆ.
ಉಡುಪಿ, ಕುಂದಾಪುರ, ಕಾರ್ಕಳ ಭಾಗಗಳಲ್ಲಿ ಈ ಸವಿತಾ ಸೀ ಧನ್ ಸಾಲ ವಿತರಣಾ ಯೋಜನೆ ಶೇ.15 ಬಡ್ಡಿದರದಲ್ಲಿ ಸಾಲವನ್ನು ನೀಡಲಾಗು ತ್ತದೆ. 10 ಮಂದಿಗಳಿರುವ ಗುಂಪುಗಳಿಗೆ ಸುಮಾರು 4 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ಗುಂಪಿನ ಸಾಲ ಮರುಪಾವತಿಯನ್ನು ಪರಿಗಣಿಸಿ ಅಗತ್ಯವಿದ್ದರೆ ಸಾಲದ ಮೊತ್ತವನ್ನು ಹೆಚ್ಚಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶಾಖೆಗಳ ಮೂಲಕ ವಿವಿಧ ಸಹಕಾರಿ ಸಂಘಗಳ ಸಹಯೋಗದೊಂದಿಗೆ 963 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. 14263 ಸದಸ್ಯರನ್ನು ಸೇರ್ಪಡೆಗೊಳಿಸಿದ್ದು, 34.76 ಕೋಟಿ ರೂ. ಸಾಲ ನೀಡಲಾಗಿದೆ. ಸ್ವ ಸಹಾಯ ಗುಂಪಿನ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದ್ದು, ಪ್ರಸ್ತುತ ಸಾಲಿನಿಂದ ಪ್ರತಿ ಸದಸ್ಯ ಕುಟುಂಬಕ್ಕೆ ಎಲ್ಲಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ 50 ಸಾವಿರ ರೂ. ವರೆಗೆ ಆರೋಗ್ಯ ವಿಮೆ ನೀಡಲಾಗುವುದೆಂದು ಅವರು ಹೇಳಿದರು.
ಸವಿತಾ ಸಮಾಜ ವಿವಿದ್ಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಾತನಾಡಿ, ಸವಿತಾ ಸೆಲೂನ್ ಸಾಮಾಗ್ರಿ ಮಳಿಗೆಯಲ್ಲಿ ವರ್ಷಕ್ಕೆ ಕನಿಷ್ಠ 12 ಸಾವಿರ ರೂ. ವ್ಯವಹರಿಸುತ್ತಿರುವ ಕ್ಷೌರಿಕ ವೃತ್ತಿನಿರತ ಸದಸ್ಯರಿಗೆ ಸಹಕಾರಿಯ ಲಾಭಾಂಶದಲ್ಲಿ 5000ರೂ. ನಿಂದ 25 ಸಾವಿರ ರೂ. ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು 30 ವೃತ್ತಿ ಬಾಂಧವರು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷ ಗೋವಿಂದ ಭಂಡಾರಿ ಅಮ್ಮುಂಜೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ ಬೈಕಾಡಿ, ಶುಭಂ ಸಂಸ್ಥೆಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಕಾರ್ಯದರ್ಶಿ ಧನಂಜಯ್ ಉಪಸ್ಥಿತರಿದ್ದರು.







