ದುಬೈ: ನಾಪತ್ತೆಯಾಗಿದ್ದ ಬಂಟ್ವಾಳ ನಾರ್ಶ ನಿವಾಸಿಯ ಮೃತದೇಹ ಪತ್ತೆ

ಬಂಟ್ವಾಳ, ಮಾ.9: ಕೆಲವು ದಿನಗಳಿಂದ ದುಬೈಯಲ್ಲಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಬೋಳಂತೂರು ನಾರ್ಶ ನಿವಾಸಿ ಮುತ್ತಲಿಬ್ ಎಂಬವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಹಲವು ದಿನಗಳಿಂದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಯಾರಿಗೂ ಅವರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದರಿಂದ ಕುಟುಂಬ ಸ್ಥರು ಆತಂಕಕ್ಕೀಡಾಗಿದ್ದರು. ಇದೀಗ ಮುತ್ತಲಿಬ್ ಮೃತಪಟ್ಟಿರುವುದಾಗಿ ಅಲ್ಲಿನ ಪೊಲೀಸರು ಖಚಿತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಮುತ್ತಲಿಬ್ ಅವರ ಮೃತದೇಹ ರವಿವಾರ ದುಬೈಯ ಅಲ್ ರಫಾದಲ್ಲಿ ಪತ್ತೆಯಾಗಿದೆ. ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮುತ್ತಲಿಬ್ ಅವರ ಪಾಸ್ ಪೋರ್ಟ್ ಸಂಖ್ಯೆಯ ಆಧಾರದಲ್ಲಿ ಭಾರತೀಯ ಪ್ರಜೆ ಎಂದು ಖಚಿತಪಡಿಸಿಕೊಂಡ ದುಬೈ ಪೊಲೀಸರು ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಇದೀಗ ಮೃತದೇಹ ದುಬೈ ರಾಶೀದ್ ಆಸ್ಪತ್ರೆಯಲ್ಲಿ ಇದೆ ಎಂದು ತಿಳಿದುಬಂದಿದೆ.
ಮುತ್ತಲಿಬ್ ಬೋಳಂತೂರು ನಾರ್ಶದ ಸೂಫಿ ಮುಕ್ರೀಕ ಎಂಬವರ ಪುತ್ರನಾಗಿದ್ದು ಅವರು ಈ ಹಿಂದೆ ಧಾರ್ಮಿಕ ಗುರುವಾಗಿ ಮದ್ರಸಾದಲ್ಲಿ ಕೆಲಸ ಮಾಡಿದ್ದರು. ಆನಂತರ ಇಂಜಿನೀಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿಕೊಂಡಿದ್ದರು. ಆನಂತರ ದುಬೈಗೆ ತೆರಳಿದ್ದರು.
ಮುತ್ತಲಿಬ್ ಅಂಕಣ ಬರಹಗಾರರಾಗಿದ್ದರು. ವಿಜಯಕಿರಣ, ಮದರಂಗಿ ಪತ್ರಿಕೆಗೆ ಅಂಕಣ ಬರೆದು ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಇವರ ನಿಗೂಢ ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.







