ಸದನದಲ್ಲಿ ಬಟ್ಟೆ ಬಿಚ್ಚಿ ಮಲಗಿದ್ದ ಬಿಎಸ್ವೈ ಫೋಟೋ ಶೇರ್ ಮಾಡಿ ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್

Photo: twitter.com/INCKarnataka
ಬೆಂಗಳೂರು, ಮಾ.9: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಸದನದಲ್ಲಿ ಅಂಗಿ ಬಿಚ್ಚಿ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿ ಮುಂದುವರಿದಿದ್ದು, ಸದನದಲ್ಲಿ ಬಟ್ಟೆ ಬಿಚ್ಚಿ ಮಲಗಿದ್ದ ಬಿಎಸ್ವೈ ಫೋಟೋವೊಂದನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಶೇರ್ ಮಾಡಿ ಬಿಜೆಪಿಯನ್ನು ಕುಟುಕಿದೆ.
ಈ ಸಂಬಂಧ ಕಾಂಗ್ರೆಸ್ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಹಿಂದೆ ಸದನದಲ್ಲಿ ಬಟ್ಟೆ ಬಿಚ್ಚಿ ಮಲಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸದನವನ್ನು ಏನೆಂದುಕೊಂಡಿದ್ದರು? ಲಾಡ್ಜ್, ಪ್ರವಾಸಿ ಗೃಹ, ಖಾಸಗಿ ಬೆಡ್ ರೂಮ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಧರ್ಮ ಛತ್ರ ? ಸದನದ ಘನತೆ ಬಗ್ಗೆ ಈಗ ಧುತ್ತೆಂದು ನೆನಪಾಗಿ ಎದ್ದು ಕುಳಿತ ಬಿಜೆಪಿ ಇದಕ್ಕೆ ಉತ್ತರಿಸುವುದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸರಕಾರ ಅಧಿಕಾರ ದುರುಪಯೋಗದ ದೌರ್ಜನ್ಯದಿಂದ ಬೇಸತ್ತು ಸ್ಪೀಕರ್ ಗಮನ ಸೆಳೆಯಲೆತ್ನಿಸಿದ ಶಾಸಕ ಸಂಗಮೇಶ್ ಅವರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿರುವ ರಾಜ್ಯ ಬಿಜೆಪಿ ಮೊದಲು ಉತ್ತರಿಸಬೇಕು. ಗೂಳಿಹಟ್ಟಿ ಶೇಖರ್ ಬಟ್ಟೆ ಬಿಚ್ಚಿ ಕುಣಿದಾಗ ಅವಮಾನವಲ್ಲವೇ? ತಮ್ಮವರು ಬಟ್ಟೆ ಬಿಚ್ಚಿ ಬೆತ್ತಲಾಗಿದ್ದು ರಾಜ್ಯಕ್ಕಾದ ಅವಮಾನವಲ್ಲವೇ? ಎಂದು ಟೀಕಿಸಿದೆ.
ರಾಜ್ಯದ ಬಜೆಟ್ನಲ್ಲಿ ಸಾಲದ ಗಂಟು ಭಾರವಾಗಿ ತೂಗುತ್ತಿದೆಯೇ ಹೊರತು, ಬಹಳ ಸದ್ದು ಮಾಡಿದ್ದ ಕೇಂದ್ರ ಸರಕಾರದ 20 ಲಕ್ಷ ಕೋಟಿ ರೂ.ಪ್ಯಾಕೇಜ್ನ ಸುಳಿವಿಲ್ಲ. ಪಿಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ದಕ್ಕಿದ ನೆರವಿನ ಯಾವುದೇ ಪ್ರಸ್ತಾಪವೂ ಇಲ್ಲ. ಹಾಗಾದರೆ ಆ "ಪ್ಯಾಕೇಜ್" ಮತ್ತು "ಕೇರ್ಸ್"ಗಳು ಎಲ್ಲಿ ಹೋದವು, ಯಾರಿಗೆ ದಕ್ಕಿದವು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸರಕಾರಿ ದಾಖಲೆಗಳ ಪ್ರಕಾರ ಕಳೆದ ಹತ್ತು ತಿಂಗಳಲ್ಲಿ ದೇಶದಾದ್ಯಂತ 10,113 ಮತ್ತು ಕರ್ನಾಟಕದಲ್ಲಿ 836 ಕಂಪೆನಿಗಳು ಮುಚ್ಚಿವೆ. ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಎನ್ನುವ ಘೋಷಣೆಗಳೆಲ್ಲ ಸುದ್ದಿಗಳಿಗೆ ಹೆಡ್ ಲೈನ್ ಒದಗಿಸುವ ಬೂಟಾಟಿಕೆ. ವಾಸ್ತವದಲ್ಲಿ ಆತ್ಮ ಬರ್ಬರವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬೋಗಸ್ ಬಜೆಟ್ನಲ್ಲಿ ನವೋಧ್ಯಮಗಳ ಚೇತರಿಕೆಗೆ ಯಾವ ಅಂಶವೂ ಇಲ್ಲ. ಸದನದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ್ದೆ ಬಿಜೆಪಿಯ ಇತಿಹಾಸ ಹಾಗೂ ಸಾಧನೆ. ಪವಿತ್ರವಾದ ಸದನದಲ್ಲಿ ಬಟ್ಟೆ ಬಿಚ್ಚಿಕೊಂಡು ಮಲಗಿ, ಕಸ ಕಡ್ಡಿಗಳನ್ನೆಸೆದು ಸಂತೆಗಿಂತಲೂ ಕೆಟ್ಟ ಸ್ಥಿತಿಗೆ ತಂದಿದ್ದು ರಾಜ್ಯದ ಜನತೆಗೆ ಇನ್ನೂ ನೆನಪಿದೆ. ಇಂತ ಬಿಜೆಪಿ ಸದನದ ಪಾವಿತ್ರ್ಯತೆ ಬಗ್ಗೆ ಮಾತಾಡುವುದೂ ಒಂದೇ. ಭೂತ ಭಗವದ್ಗೀತೆ ಹೇಳುವುದೂ ಒಂದೇ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಖಾಸಗಿ ವಿಮಾನದ ಬಾಡಿಗೆ, ಹೋಟೆಲ್ ಬಿಲ್, ಶಾಸಕರ ಖರೀದಿ ಬಾಬ್ತು, ಊಟದ ಬಿಲ್, ಅಷ್ಟೇ ಅಲ್ಲದೆ ಈಗ ರಮೇಶ್ ಜಾರಕಿಹೊಳಿಯವರ ಪ್ರಕಾರ "ಆಪರೇಷನ್ ಕಮಲ" ಹಗರಣಕ್ಕೆ ಸಿಡಿ ಶೂಟಿಂಗ್ ಖರ್ಚು, ಹನಿಟ್ರಾಪ್ ಖರ್ಚು ಸೇರಿದೆ. ಸಾವಿರಾರು ಕೋಟಿ ಹಗರಣವಾದ ಆಪರೇಷನ್ ಕಮಲದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಲಿ. ಹಿಂದೇಟೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಕೊಡುತ್ತಿರುವಿರಿ. ಸಂತೋಷ. ಒಕ್ಕಲಿಗರ ನಿಗಮ ಸ್ಥಾಪಿಸಿ, 500 ಕೋಟಿ ರೂ.ಕೊಡುವ ಕನಸು ಬಿತ್ತಿದ್ದೀರಿ. ಅದೂ ಕೂಡ ಸಂತೋಷವೇ. ಆದರೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ 16 ನಿಗಮಗಳಿಗೆ ಕೇವಲ 500 ಕೋಟಿಯೇ? ನಿಮ್ಮ "ಸಬ್ ಕ ಸಾಥ್, ಸಬ್ ಕ ವಿಕಾಸ್" ಅಂದ್ರೆ ಇದೇನಾ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯ ಸಿಡಿ ಸರಕಾರದ ಬಿಜೆಪಿ ಬ್ಲೂ ಬಾಯ್ಸ್ ಶಾಸಕರು ಎಲ್ಲೆಂದರಲ್ಲಿ ಬಟ್ಟೆ ಬಿಚ್ಚಿ ರಾಜ್ಯದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಬ್ಲಾಕ್ಮೇಲ್ ಜನತಾ ಪಾರ್ಟಿಯಲ್ಲಿ ಸಿಡಿ ತಯಾರಿಕಾ ಘಟಕವೇ ಇದ್ದಂತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಅಧಿಕಾರವೇರಿದಾಗ ರಾಜ್ಯದ ಮರ್ಯಾದೆ ಮೂರಾಬಟ್ಟೆಯಾಗಿದೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಕಾಲದಲ್ಲಿ ಕರ್ನಾಟಕಕ್ಕೆ "ಐಟಿ ಹಬ್" ಎನ್ನುವ ಖ್ಯಾತಿ. ರಾಜ್ಯ ಬಿಜೆಪಿ ಆಡಳಿತದಲ್ಲಿ "ಪೋರ್ನ್ ಹಬ್" ಎನ್ನುವ ಕುಖ್ಯಾತಿ. ಬಿಜೆಪಿ ಬ್ಲೂ ಬಾಯ್ಸ್ ಗಳಿಂದ ಶ್ರಮವಹಿಸಿ ಗಳಿಸಿದ್ದ ರಾಜ್ಯದ ಮರ್ಯಾದೆ ಮಣ್ಣು ಪಾಲು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸದನದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ್ದೆ ಬಿಜೆಪಿಯ ಇತಿಹಾಸ ಹಾಗೂ ಸಾಧನೆ.
— Karnataka Congress (@INCKarnataka) March 9, 2021
ಪವಿತ್ರವಾದ ಸದನದಲ್ಲಿ ಬಟ್ಟೆ ಬಿಚ್ಚಿಕೊಂಡು ಮಲಗಿ, ಕಸ ಕಡ್ಡಿಗಳನ್ನೆಸೆದು ಸಂತೆಗಿಂತಲೂ ಕೆಟ್ಟ ಸ್ಥಿತಿಗೆ ತಂದಿದ್ದು ರಾಜ್ಯದ ಜನತೆಗೆ ಇನ್ನೂ ನೆನಪಿದೆ.
ಇಂತ @BJP4Karnataka ಸದನದ ಪಾವಿತ್ರತೆ ಬಗ್ಗೆ ಮಾತಾಡುವುದೂ ಒಂದೇ.
ಭೂತ ಭಗವದ್ಗೀತೆ ಹೇಳುವುದೂ ಒಂದೇ! pic.twitter.com/VLNCzHusPH
ಸರ್ಕಾರ ಅಧಿಕಾರ ದುರುಪಯೋಗದ ದೌರ್ಜನ್ಯದಿಂದ ಬೇಸತ್ತು ಸ್ಪೀಕರ್ ಗಮನ ಸೆಳೆಯಲೆತ್ನಿಸಿದ ಶಾಸಕ ಸಂಗಮೇಶ್ ಅವರ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿರುವ @BJP4Karnataka ಮೊದಲು ಉತ್ತರಿಸಬೇಕು.
— Karnataka Congress (@INCKarnataka) March 9, 2021
ಗೂಳಿಹಟ್ಟಿ ಶೇಖರ್ ಬಟ್ಟೆ ಬಿಚ್ಚಿ ಕುಣಿದಾಗ ಅವಮಾನವಲ್ಲವೇ?
ತಮ್ಮವರು ಬಟ್ಟೆ ಬಿಚ್ಚಿ ಬೆತ್ತಲಾಗಿದ್ದು ರಾಜ್ಯಕ್ಕಾದ ಅವಮಾನವಲ್ಲವೇ?







