ಮಂಗಳೂರು: ಹಳೆ ರೋಗಿಗಳಿಗೆ ಇಂಡಿಯಾನ ಆಸ್ಪತ್ರೆಯಿಂದ ಉಚಿತ ಕೋವಿಡ್ ಲಸಿಕೆ

ಮಂಗಳೂರು : ನಗರದ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ತನ್ನ ಎಲ್ಲಾ ನೋಂದಾಯಿತ ಹಳೆ ರೋಗಿಗಳಿಗೆ ಉಚಿತ ಕೋವಿಡ್ ಲಸಿಕೆ ನೀಡಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇ.ವಿಜಯ ಚಂದ್ರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಲಸಿಕೆ ಪ್ರಕ್ರಿಯೆಯ ಮೂರನೇ ಹಂತದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಸಹಕಾಯಿಲೆಗಳೊಂದಿಗೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಗುರುತಿಸಲ್ಪಟ್ಟ ಭಾರತದಾದ್ಯಂತದ 20,000 ಖಾಸಗಿ ಆಸ್ಪತ್ರೆಗಳಲ್ಲಿ ಇಂಡಿಯಾನ ಆಸ್ಪತ್ರೆ ಕೂಡ ಸೇರಿದೆ ಎನ್ನುವುದನ್ನು ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬೈ ತಿಳಿಸಿದ್ದಾರೆ.
ಭಾರತ ಸರ್ಕಾರವು ಕೋವಿಡ್ ನಿಯಂತ್ರಣ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಸಂತಸದ ವಿಷಯ. ಅದು ದೇಶಾದ್ಯಂತ ಪರಿಣಾಮಕಾರಿಯಾಗಿ ಮುಂದುವರೆದಿದೆ. ಆದರೆ ಕೆಲವು ಜನರಲ್ಲಿ, ವಿಶೇಷವಾಗಿ ಹೃದಯ, ಮೂತ್ರಪಿಂಡ ಮತ್ತು ಇತರ ಕಾಯಿಲೆಗಳಂತಹ ಸಹಕಾಯಿಲೆಗಳನ್ನು ಹೊಂದಿರುವವರಲ್ಲಿ, ಲಸಿಕೆ ಬಗ್ಗೆ ಆತಂಕ ಮತ್ತು ತಪ್ಪು ಕಲ್ಪನೆಗಳಿವೆ. ಅವರ ಸಂಶಯಗಳನ್ನು ನಿವಾರಿಸಲು ಮತ್ತು ಅವರಲ್ಲಿ ವಿಶ್ವಾಸವನ್ನು ಮೂಡಿಸಲು ಇಂಡಿಯಾನ ಆಸ್ಪತ್ರೆ ತಮ್ಮ ಹಳೆಯ ರೋಗಿಗಳನ್ನೆಲ್ಲ ವಾಪಸ್ ಕರೆದು ಅವರೆಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಇದು ನಮ್ಮ ಸಾಮಾಜಿಕ ಜವಾಬ್ದಾರಿಯ ಬದ್ಧತೆಗೆ ಅನುಗುಣವಾಗಿದೆ . ಈ ಹಿಂದೆ ಒಮ್ಮೆಯಾದರೂ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಮ್ಮ ನೋಂದಾಯಿತ ಹಳೆ ರೋಗಿಗಳಿಗೆ ನಾವು ಉಚಿತ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ಉಚಿತ ಲಸಿಕೆ ಪಡೆಯಲು ಬಯಸುವವರು 7259016560 ಸಂಖ್ಯೆಗೆ ಕರೆ ಮಾಡಬಹುದು. ಕರೆ ಮಾಡಿದ ಬಳಿಕ ಲಸಿಕೆ ನೀಡುವ ದಿನಾಂಕ ಮತ್ತು ಸಮಯದ ಬಗ್ಗೆ ಅವರಿಗೆ ತಿಳಿಸಲಾಗುತ್ತದೆ. ಸರಕಾರದ ನಿಯಮಗಳ ಪ್ರಕಾರ ಲಸಿಕೆ ಪಡಯಲು ಅವರು ತಮ್ಮ ಆಧಾರ್ ಕಾರ್ಡ್ ಹಾಜರುಪಡಿಸಬೇಕು . ಇಂಡಿಯಾನ ಆಸ್ಪತ್ರೆಯ ಅಧ್ಯಕ್ಷ ಡಾ. ಆಲಿ ಕುಂಬ್ಳೆಯವರ ಪ್ರಕಾರ, ಕೋವಿಡ್ ಲಸಿಕೆ ಕೇಂದ್ರವಾಗಿ ಇಂಡಿಯಾನ ಆಸ್ಪತ್ರೆ ಸರಿಯಾದ ಪ್ರಕ್ರಿಯೆ, ಗುಣಮಟ್ಟ ಮತ್ತು ಸುರಕ್ಷತೆ, ಸಾಕಷ್ಟು ಶೀತಲ ಸರಪಣಿ ವ್ಯವಸ್ಥೆ (ಕೋಲ್ಡ್ ಬೈನ್) , ಸಾಕಷ್ಟು ಸಂಖ್ಯೆಯ ಲಸಿಕೆ ಮತ್ತು ಸಹಾಯಕ ಸಿಬ್ಬಂದಿಗಳ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತದೆ. ರೋಗನಿರೋಧಕ ಪ್ರಕ್ರಿಯೆಯ ನಂತರದ ಯಾವುದೇ ಪ್ರತಿಕೂಲ ಘಟನೆ ( ಎಇಎಫ್‌ಐ ) ಗಳನ್ನು ಪರಿಹರಿಸಲು ನಾವು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ ಎಂದು ವಿಜಯ ಚಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ಸಲಹೆಗಾರ ಅಫ್ತಾಬ್ ಕೋಲಾ ಉಪಸ್ಥಿತರಿದ್ದರು.








