ಜಮ್ಮು-ಕಾಶ್ಮೀರದಲ್ಲಿ ಬಂಧಿತರ ಪೈಕಿ 173 ಜನರು ಇನ್ನೂ ಜೈಲಿನಲ್ಲಿದ್ದಾರೆ: ಕೇಂದ್ರ

ಹೊಸದಿಲ್ಲಿ,ಮಾ.9: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗ ಬಂಧಿಸಲ್ಪಟ್ಟಿದ್ದ ಪ್ರತ್ಯೇಕತಾವಾದಿಗಳು,ಉಗ್ರರ ಬೆಂಬಲಿಗರು ಮತ್ತು ಕಲ್ಲು ತೂರಾಟಗಾರರು ಸೇರಿದಂತೆ 173 ಜನರು ಈಗಲೂ ಜೈಲಿನಲ್ಲಿದ್ದಾರೆ ಎಂದು ಸಹಾಯಕ ಗೃಹಸಚಿವ ಜಿ.ಕಿಶನ್ ರೆಡ್ಡಿ ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
2019,ಆಗಸ್ಟ್‌ನಲ್ಲಿ ಆಗಿನ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಸಾಂವಿಧಾನಿಕ ಬದಲಾವಣೆಗಳನ್ನು ಮಾಡಿದ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ದೃಷ್ಟಿಯಿಂದ ಕೆಲವು ವ್ಯಕ್ತಿಗಳ ಬಂಧನ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 2019,ಆ.1ರಿಂದ ಪ್ರತ್ಯೇಕತಾವಾದಿಗಳು,ಉಗ್ರರ ಬೆಂಬಲಿಗರು,ಕಲ್ಲು ತೂರಾಟಗಾರರು ಇತ್ಯಾದಿ ಸೇರಿದಂತೆ 627 ಜನರನ್ನು ವಿವಿಧ ಸಂದರ್ಭಗಳಲ್ಲಿ ಬಂಧಿಸಲಾಗಿತ್ತು. ಈ ಪೈಕಿ 454 ಜನರನ್ನು ಬಿಡುಗಡೆ ಮಾಡಲಾಗಿದ್ದು,173 ಜನರು ಬಂಧನದಲ್ಲಿ ಮುಂದುವರಿದಿದ್ದಾರೆ ಎಂದು ಜಮ್ಮು-ಕಾಶ್ಮೀರ ಸರಕಾರವು ವರದಿ ಸಲ್ಲಿಸಿದೆ ಎಂದು ರೆಡ್ಡಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.
ಜಮ್ಮು-ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಯಾವುದೇ ವ್ಯಕ್ತಿಯು ಗೃಹಬಂಧನದಲ್ಲಿಲ್ಲ ಎಂದೂ ಜಮ್ಮು-ಕಾಶ್ಮೀರ ಸರಕಾರವು ವರದಿಯಲ್ಲಿ ತಿಳಿಸಿದೆ ಎಂದರು.





