ನಂದಿಗ್ರಾಮದಲ್ಲಿ ಚಹಾ ತಯಾರಿಸಿ ಗಮನ ಸೆಳೆದ ಮಮತಾ ಬ್ಯಾನರ್ಜಿ

ಕೋಲ್ಕತಾ:ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನಾದಿನವಾದ ಮಂಗಳವಾರ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಸ್ತೆ ಬದಿಯ ಟೀ ಸ್ಟಾಲ್ ಗೆ ಭೇಟಿ ನೀಡಿ ಚಹಾ ತಯಾರಿಸುವ ಮೂಲಕ ಸ್ವಲ್ಪ ಹೊತ್ತು ಚಹಾವಾಲಿಯಾಗಿ ಕಾಣಿಸಿಕೊಂಡರು.
ಸ್ಥಳೀಯರೊಂದಿಗೆ ಸಂವಾದ ನಡೆಸಿದ ಮಮತಾ ಬ್ಯಾನರ್ಜಿ ತನ್ನ ಸುತ್ತಮುತ್ತ ನೆರೆದಿದ್ದ ಜನರಿಗೆ ಟೀ ಹಂಚಿದರು.. ಬಳಿಕ ಟೀ ಸ್ಟಾಲ್ ನಲ್ಲಿ ಟೀ ಸೇವಿಸಿದರು.
ಮಮತಾ ಬ್ಯಾನರ್ಜಿ ಅವರು ದೊಡ್ಡ ಕೆಟ್ಟೆಲ್ ನಿಂದ ಕಾಗದದ ಕಪ್ ಗಳಿಗೆ ಚಹಾವನ್ನು ಸುರಿಯುವುದು ವೀಡಿಯೊದಲ್ಲಿ ಸೆರೆಯಾಗಿದೆ. ಮಮತಾ ಅವರ ಸುತ್ತಮುತ್ತಲಿದ್ದ ಜನರು ಈ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದು ಕಂಡುಬಂದಿತು.
ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಚಹಾ ಸೇವಿಸುವುದು ಹಾಗೂ ಚಹಾ ವಿತರಿಸುವುದು ಇದೇ ಮೊದಲಲ್ಲ. ಆಗಸ್ಟ್ 2019ರಲ್ಲಿ ಮಮತಾ ಅವರು ದಿಘಾದ ದತ್ತಪುರ ಗ್ರಾಮದಲ್ಲಿ ಟೀ ಸ್ಟಾಲ್ ಗೆ ತೆರಳಿ ಟೀ ಅನ್ನು ತಯಾರಿಸಿ ಸ್ಥಳೀಯರಿಗೆ ವಿತರಿಸಿದ್ದರು.
ಮಮತಾ ಅವರು ನಂದಿಗ್ರಾಮಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಮಾರ್ಚ್ 10ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
ಇದಕ್ಕೂ ಮೊದಲು ರ್ಯಾಲಿಯಲ್ಲಿ ಟಿಎಂಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ, ತಮ್ಮ ಮಾಜಿ ನಂಬಿಕಸ್ತ, ಈಗ ಬಿಜೆಪಿಯಲ್ಲಿರುವ ಸುವೇಂದು ಅಧಿಕಾರಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಎಪ್ರಿಲ್ 1ರಂದು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯ ವೇಳೆ ಪ್ರತಿಷ್ಟಿತ ನಂದಿಗ್ರಾಮದಲ್ಲಿ ಮತದಾನ ನಡೆಯಲಿದೆ.
Chai pe charcha! @MamataOfficial at a tea stall in Nandigram this evening! pic.twitter.com/eb0RuL8fbG
— Poulomi Saha (@PoulomiMSaha) March 9, 2021







