ಕಿಂಡಿ ಅಣೆಕಟ್ಟು ನಿರ್ವಹಣೆ ಬಗ್ಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಶಾಸಕರ ಸಭೆ: ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಮಾ. 9: ‘ಪಶ್ಚಿಮ ವಾಹಿನಿ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಆ ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ' ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸುಕುಮಾರಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗಾಗಿ ಒಟ್ಟು 162 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಿರುವ ಕಿಂಡಿ ಅಣ್ಣೆಕಟ್ಟುಗಳ ನಿರ್ವಹಣೆ ಸಮರ್ಪಕವಾಗಿ ಆಗದೆ ಸಮಸ್ಯೆಯಾಗಿದೆ. ಹೀಗಾಗಿ ಈ ಸಂಬಂಧ ಎಲ್ಲ ಶಾಸಕರ ಸಭೆ ಕರೆದು ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸುವುದಲ್ಲದೆ, ಮಾಸ್ಟರ್ ಪ್ಲಾನ್ ಜತೆಗೆ ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸುಕುಮಾರ ಶೆಟ್ಟಿ, ಕಿಂಡಿ ಅಣೆಕಟ್ಟುಗಳ ಕಾಮಗಾರಿಗಳು ಇಲಾಖೆ ನಿರ್ವಹಣೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಕಿಂಡಿ ಅಣೆಕಟ್ಟುಗಳಲ್ಲಿ ಹೂಳು ತುಂಬುತ್ತಿರುವುದರಿಂದ ತೊಂದರೆ ಆಗುತ್ತಿದ್ದು, ಅವುಗಳ ನಿರ್ವಹಣೆ ಮತ್ತು ಹೂಳೆತ್ತಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.





