ಕೈಗಾರಿಕಾ ನೀತಿ ಜಾರಿಯಿಂದ 2-3ನೆ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ: ಸಚಿವ ಶೆಟ್ಟರ್

ಬೆಂಗಳೂರು, ಮಾ.9: 2020-2025ರ ಕೈಗಾರಿಕಾ ನೀತಿ ಜಾರಿಯಾದರೇ ರಾಜ್ಯದ 2 ಮತ್ತು 3ನೆ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಂಗಳವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವ್ಹಿ.ಸಂಕನೂರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು, ಮೈಸೂರು, ಕೋಲಾರ ಜಿಲ್ಲೆಯ ಒತ್ತಡ ಕಡಿಮೆ ಮಾಡಿ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ನೂತನ ಕೈಗಾರಿಕಾ ನೀತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 76,376 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿದ್ದು, ಇದರಿಂದ 1.77 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದರ ಪರಿಣಾಮ ಲಾಕ್‍ಡೌನ್ ಬಳಿಕ ಸಣ್ಣ ಕೈಗಾರಿಕೆಗಳು ಚೇತರಿಸಿಕೊಳ್ಳುತ್ತಿವೆ ಎಂದು ಹೇಳಿದರು.





