ಆಪರೇಷನ್ ಕಮಲಕ್ಕೆ ನನಗೂ ಆಫರ್ ಬಂದಿತ್ತು: ಜೆಡಿಎಸ್ ಶಾಸಕ ಮಂಜುನಾಥ್ ಆರೋಪ
ಬೆಂಗಳೂರು, ಮಾ.9: ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಒಳಗಾದ ಸಚಿವರ ಸದ್ಯದ ಸ್ಥಿತಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಎನ್.ಮಂಜುನಾಥ್, ಆಪರೇಷನ್ ಕಮಲಕ್ಕೆ ನನಗೂ ಆಫರ್ ಬಂದಿತ್ತು ಎಂದು ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಚಿಕ್ಕಬಾಣಾವರದ ಶ್ರೀಕೃಷ್ಣನಗರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ನನಗೂ ಆಫರ್ ಬಂದಿತ್ತು. ಕೆಲವು ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಕೋರಿದ್ದರು. ಸಚಿವರನ್ನಾಗಿ ಮಾಡುವುದಾಗಿ ಹೇಳಿದ್ದರು. ಇದಕ್ಕಾಗಿ ದೊಡ್ಡ ಮೊತ್ತದ ಹಣದ ಆಮಿಷವೊಡ್ಡಲಾಗಿತ್ತು ಎಂದು ಹೇಳಿದರು.
ನಾನು ಕೂಡ ಗ್ರಾಮೀಣ ಪ್ರದೇಶದಿಂದ ಬಂದವನು. ಜೀವನದಲ್ಲಿ ತತ್ವ, ಸಿದ್ಧಾಂತಗಳನ್ನು ಇಟ್ಟುಕೊಂಡು ಬದುಕುತ್ತಿರುವವನು. ಹಣ ಮಾಡುವುದಕ್ಕಾಗಿಯೇ ಶಾಸಕನಾಗಿಲ್ಲ. ಜನರ ಸಮಸ್ಯೆಗಳೇನು ಎನ್ನುವುದು ತಿಳಿದು, ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಒಳ್ಳೆಯ ವ್ಯಕ್ತಿ ಎಂದೆನಿಸಿಕೊಳ್ಳಲು ಬಯಸುತ್ತೇನೆ ಎಂದು ಅವರು ಹೇಳಿದರು
ಕೆಲಸ ಮಾಡಲು ಸಚಿವನಾಗಬೇಕಿಲ್ಲ: ಈ ಹಿಂದೆ ನಾನೂ ಕೂಡ ಆಡಳಿತ ಪಕ್ಷದಲ್ಲೆ ಇದ್ದೆ. ಈಗ ವಿರೋಧ ಪಕ್ಷದಲ್ಲಿದ್ದೇನೆ. ಈ ಬಗ್ಗೆಯೇನು ನನಗೆ ಬೇಸರವಿಲ್ಲ. ನಾನು ಶಾಸಕನಾಗಿ ಎರಡೂವರೆ ವರ್ಷ ಆಗಿದೆ. ಜನರ ಸಮಸ್ಯೆ ಕೇಳಲು, ಕ್ಷೇತ್ರದ ಕೆಲಸ ಮಾಡಲು ಸಚಿವ ಆಗಬೇಕಿಲ್ಲ. ಅಧಿಕಾರ ಇರುತ್ತದೆ, ಹೋಗುತ್ತದೆ. ಆದರೆ, ಒಳ್ಳೆಯ ಕೆಲಸ ಮಾಡಿದರೆ ಜನರು ಮತ್ತೊಮ್ಮೆ ಕೈ ಹಿಡಿಯುತ್ತಾರೆಂಬ ವಿಶ್ವಾಸ ನನಗಿದೆ ಎಂದು ಮಂಜುನಾಥ್ ಹೇಳಿದರು.







