2100ರಲ್ಲಿ ಬೇಸಿಗೆ 6 ತಿಂಗಳುಗಳ ಕಾಲ ವಿಸ್ತರಿಸಬಹುದು: ಅಧ್ಯಯನ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಲಂಡನ್, ಮಾ. 9: ಹವಾಮಾನ ಬದಲಾವಣೆಯ ವೇಗವನ್ನು ತ್ವರಿತವಾಗಿ ಕಡಿತಗೊಳಿಸದಿದ್ದರೆ, 2100ರ ವೇಳೆಗೆ ಉತ್ತರಾರ್ಧ ಗೋಳದಲ್ಲಿ ಬೇಸಿಗೆಯು ಆರು ತಿಂಗಳವರೆಗೆ ವಿಸ್ತರಿಸಬಹುದಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಬೇಸಿಗೆಯು ವರ್ಷದಲ್ಲಿ ಆರು ತಿಂಗಳವರೆಗೆ ವಿಸ್ತರಿಸಿದರೆ ಕೃಷಿ, ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಅಗಾಧ ಪ್ರಮಾಣದ ದುಷ್ಪರಿಣಾಮ ಉಂಟಾಗುತ್ತದೆ ಎಂದು ‘ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ಹೇಳಿದೆ.
ಮೆಡಿಟರೇನಿಯನ್ ವಲಯ ಮತ್ತು ಟಿಬೆಟ್ ಪ್ರಸ್ಥಭೂಮಿಯಲ್ಲಿ ಋತುಗಳು ಭಾರೀ ಪ್ರಮಾಣದಲ್ಲಿ ಬದಲಾವಣೆಗೆ ಒಳಗಾಗಿವೆ ಎಂದು ಅಧ್ಯಯನ ತಿಳಿಸಿದೆ.
1950ರ ದಶಕದಲ್ಲಿ ಉತ್ತರ ಗೋಳಾರ್ಧದಲ್ಲಿ ನಾಲ್ಕು ಋತುಗಳು ನಿರ್ದಿಷ್ಟ ಸಮಯಗಳಲ್ಲಿ ಹಾಗೂ ನಿರ್ದಿಷ್ಟ ಮಾದರಿಗಳಲ್ಲಿ ಆಗಮಿಸುತ್ತಿದ್ದವು. ಆದರೆ, ಈಗ ಋತುಗಳ ಆರಂಭ ಮತ್ತು ಅವಧಿಗಳಲ್ಲಿ ನಾಟಕೀಯ ಹಾಗೂ ಅನಿರ್ದಿಷ್ಟ ಬದಲಾವಣೆಗಳು ಗೋಚರಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಈ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದಾಗಿದೆ ಎಂದು ಅಧ್ಯಯನ ಹೇಳಿದೆ.





