''ಕೊಲ್ಲೂರು ದೇವಸ್ಥಾನದ 4.20 ಕೆಜಿ ಚಿನ್ನ ಕಳ್ಳತನದಲ್ಲಿ ಅಧಿಕಾರಿ, ಸಿಬ್ಬಂದಿ ಭಾಗಿ''
ದೇವಸ್ಥಾನ-ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ಆರೋಪ

ಬೆಂಗಳೂರು, ಮಾ.9: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರು ಕಾಣಿಕೆಯ ರೂಪದಲ್ಲಿ ಹಾಕಿದ ಚಿನ್ನ, ಬೆಳ್ಳಿಯನ್ನು ದೃಢೀಕರಣ ಮಾಡಿ ಲೆಕ್ಕಪರಿಶೋಧಕರಿಗೆ ಸಲ್ಲಿಸಿಲ್ಲ. ಇದರ ಪರಿಣಾಮವಾಗಿ ದೇವಸ್ಥಾನದ 4.20 ಕೆಜಿ ಚಿನ್ನ ಕಳ್ಳತನ ಪ್ರಕರಣದಲ್ಲಿ 15 ವರ್ಷಗಳ ಹಿಂದಿನ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಇತರೆ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ಸಮನ್ವಯಕ ಮೋಹನ್‍ಗೌಡ ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವಸ್ಥಾನದಿಂದ ಮುಂಗಡದ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ. 2018-19ನೆ ಸಾಲಿನಲ್ಲಿ ವಿವಿಧ ಉದ್ದೇಶಕ್ಕೆ ನೀಡಿದ 2.83 ಕೋಟಿ ಬಾಕಿ ಬಗ್ಗೆ ಯಾವುದೇ ಮಾಹಿತಿ ದೇವಸ್ಥಾನದ ಬಳಿ ಇಲ್ಲದಿರುವುದು ಅತ್ಯಂತ ಬೇಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ? ಅವರ ಹುದ್ದೆ, ವೇತನದ ಬಗ್ಗೆ ದೇವಸ್ಥಾನದಲ್ಲಿ ದಾಖಲೆ ಇಲ್ಲ ಹಾಗೂ ದೇವಸ್ಥಾನದ ಸಿಬ್ಬಂದಿಗಳ ಭವಿಷ್ಯ ನಿಧಿಯನ್ನು ಸರಿಯಾದ ಸಮಯಕ್ಕೆ ತುಂಬದ ಕಾರಣ, ಆಯುಕ್ತರು ಹಾಕಿದ ದಂಡದ ಮೊತ್ತ 7,46,355 ರೂ.ಅಧಿಕಾರಿಯ ಕಿಸೆಯಿಂದ ಪಾವತಿಸದೆ, ಹುಂಡಿಯ ಹಣದಿಂದ ತುಂಬಲಾಗಿದೆ ಎಂದು ಆರೋಪಿಸಿದರು.
ದೇವಸ್ಥಾನದ ಜಮೀನುಗಳ ಬಗ್ಗೆ ಅಧಿಕೃತ ದಾಖಲೆಗಳು ದೇವಸ್ಥಾನದ ಬಳಿ ಇಲ್ಲವಾಗಿದ್ದು, ಇದರಿಂದ, ಎಷ್ಟು ಜಮೀನು ಅತಿಕ್ರಮಣ ಆಗಿದೆ ಎಂಬುದು ತಿಳಿಯುತ್ತಿಲ್ಲ. ಹಾಗೂ 2005 ರಿಂದ 2018ರ ವರೆಗೆ ದೇವಸ್ಥಾನದ ವತಿಯಿಂದ ನೀಡಿದ 53 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿಗಳಿಗೆ ಶಾಲೆಯ ಸಮವಸ್ತ್ರಗಳಿಗಾಗಿ ಖರ್ಚು ಮಾಡಲಾಗಿದೆ. ಆದರೆ ಅದು ಯೋಗ್ಯ ವಿನಿಯೋಗವಾಗಿದೆಯೇ ಎಂಬ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ತಿಳಿಸಿದರು.
ದೇವಸ್ಥಾನದ ವ್ಯವಹಾರದಲ್ಲಿ 21.80 ಕೋಟಿ ರೂ. ಆರ್ಥಿಕ ವ್ಯವಹಾರ ಸಂಶಯಾಸ್ಪದವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯು 84.96 ಲಕ್ಷ ರೂ.ಬಾಕಿ ವಸೂಲಾತಿ ಮಾಡಬೇಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಈ ಕೂಡಲೇ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲ ಕಿರಣ ಬೆಟ್ಟದಾಪುರ, ಧಾರ್ಮಿಕ ಕ್ಷೇತ್ರದ ಹೋರಾಟಗಾರ ಪ್ರಣವ್ ಶರ್ಮ, ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಎಮ್.ಎಸ್.ಹರೀಶ್ ಉಪಸ್ಥಿತರಿದ್ದರು.







