ಚಿತ್ರಕಲೆಯಿಂದ ಸಮಾಜಕ್ಕೆ ಅತ್ಯುತ್ತಮ ಸಂದೇಶ ರವಾನೆ ಸಾಧ್ಯ : ಪ್ರೊ.ಪಿ.ಎಲ್. ಧರ್ಮ
ಶಕ್ತಿ ಕಲಾನಿಧಿ ಚಿತ್ರಕಲಾ ಸ್ಪರ್ಧೆಯ ಸಮಾರೋಪ

ಮಂಗಳೂರು, ಮಾ.9: ಚಿತ್ರಕಲೆ ಎನ್ನುವುದು ಮನುಷ್ಯ ತನ್ನ ಮಾನಸಿಕ ಒತ್ತಡದಿಂದ ಹೊರಬರಲು ಸೂಕ್ತ ಮಾಧ್ಯಮ. ಒಬ್ಬ ಚಿತ್ರಕಲಾವಿದ ತನ್ನ ಭಾವನೆ, ಕಲ್ಪನೆಗಳನ್ನು ಗೆರೆ, ಬಣ್ಣಗಳ ಮೂಲಕ ವ್ಯಕ್ತಪಡಿಸುತ್ತಾನೆ. ಆ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರುತ್ತಾನೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಅಭಿಪ್ರಾಯಪಟ್ಟಿದ್ದಾರೆ.
ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಶಕ್ತಿ ಕಲಾನಿಧಿ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ಚಿತ್ರ, ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ ಏಕೈಕ ರಾಷ್ಟ್ರ. ಅಂತಹ ರಾಷ್ಟ್ರ ದಲ್ಲಿ ಹುಟ್ಟಿದ ನಾವು ಧನ್ಯರು. ದೇಶದಲ್ಲಿ ಕೊರೋನ ಸಾಂಕ್ರಾಮಿಕ ರೋಗವು ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಆ ನಡುವೆ ಹಲವಾರು ಶಾಲೆ, ಕಾಲೇಜುಗಳು ತಮ್ಮ ಚಟುವಟಿಕೆಯನ್ನು ಪ್ರಾರಂಭಿಸಿದೆ. ಹೆತ್ತವರು ಎಚ್ಚೆತ್ತು ಮಕ್ಕಳು ಶಾಲೆಗೆ ಹೋಗುವಂತೆ ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯವನ್ನು ಬೆಳಗುವಲ್ಲಿ ಸಹಾಯಕವಾಗಬೇಕು.
ಈ ಸಂದರ್ಭದಲ್ಲಿ ಹಿರಿಯ ಚಿತ್ರಕಲಾವಿದ, ದಯಾ ಆರ್ಟ್ಸ್‌ನ ಮಖ್ಯಸ್ಥ ದಯಾನಂದ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೆತ್ತವರು ತಮ್ಮ ಮಕ್ಕಳ ಪಠ್ಯ, ವಿಷಯಗಳ ಅಂಕಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಪಠ್ಯೇತರ ವಿಷಯಗಳಲ್ಲಿ ಮಕ್ಕಳ ಆಸಕ್ತಿ, ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗುತ್ತಾರೆ. ಹೆತ್ತವರು ಮತ್ತು ಶಿಕ್ಷಕರು ಮಕ್ಕಳ ಪಠ್ಯೇತರ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅವರ ವ್ಯಕ್ತಿತ್ವವನ್ನು ಅರಳಿಸಲು ಸಹಕಾರ ನೀಡಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾಯಕ್, ಕಾರ್ಯದರ್ಶಿ ಸಂಜೀತ್ ನಾಯಕ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್ ವಹಿಸಿದ್ದರು. ಜಿಲ್ಲೆಯ 20 ಶಾಲೆಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭವ್ಯಾ ನಿರೂಪಿಸಿದರು. ಪ್ರಾಂಶುಪಾಲ ವಿದ್ಯಾ ಕಾಮತ್ ಜಿ. ಸ್ವಾಗತಿಸಿದರು. ಅಶ್ವಿನಿ ಪೈ ವಂದಿಸಿದರು.
ಬಹುಮಾನ ವಿತರಣೆ: ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಸ್ಪರ್ಧಿಗಳಿಗೆ, ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಇವರಿಗೆ ಪ್ರತಿ ವಿಭಾಗದಲ್ಲಿಯೂ ಪ್ರಥಮ ಬಹುಮಾನವಾಗಿ 3,000 ರೂ., ದ್ವಿತೀಯ ಬಹುಮಾನ 2,000, ತೃತೀಯ ಬಹುಮಾನ 1,000 ಮತ್ತು ಉತ್ತಮ ಆಯ್ಕೆಗೆ 750 ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.







