ಮಾಜಿ ಸಚಿವ ಮನಗೂಳಿ ಪುತ್ರ ಅಶೋಕ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಮಾ. 9: ಮಾಜಿ ಸಚಿವ, ಜೆಡಿಎಸ್ ಶಾಸಕ ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್ ತೊರೆದು ಮಂಗಳವಾರ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಅಶೋಕ್ ಮನಗೂಳಿ ಅವರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಷರತ್ತಿಲ್ಲದೆ ಸೇರ್ಪಡೆ: ಅಶೋಕ್ ಮನಗೂಳಿ ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರು ತಂದೆಯೂ ಈ ಹಿಂದೆಯೇ ನನ್ನನ್ನು ಭೇಟಿ ಮಾಡಿದ್ದರು. ನಾನು ಜೆಡಿಎಸ್ ಶಾಸಕನಾಗಿದ್ದೇನೆ. ನಾನು ಪಕ್ಷಕ್ಕೆ ಬರಲು ಸಾಧ್ಯವಿಲ್ಲ. ಆದರೆ, ನನ್ನ ಪುತ್ರ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಈ ಹಿಂದೆಯೇ ಕೋರಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೌರ್ಜನ್ಯ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೌರ್ಜನ್ಯ ಹೆಚ್ಚಾಗಿದ್ದು, ನಮ್ಮ ಪಕ್ಷದ ಮುಖಂಡರ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಶಾಂತಿಭಂಗ ಹೇಳಿಕೆ ಕೊಟ್ಟ ಬಿಜೆಪಿ ಮುಖಂಡರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲು ಮಾಡುವುದಿಲ್ಲ. ಆದರೆ, ನಮ್ಮ ಪಕ್ಷದ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.
ಶಾಸಕ ಸಂಗಮೇಶ್ ಸದನದಲ್ಲಿ ತಮ್ಮ ಮೇಲಿನ ದೌರ್ಜನ್ಯದಿಂದ ಆಗಿರುವ ಗಾಯವನ್ನು ತೋರಿಸಲು ಕಲಾಪದಲ್ಲಿ ಅಂಗಿ ಬಿಚ್ಚಿದ್ದು, ಅದನ್ನು ಸ್ಪೀಕರ್ ಅಸಭ್ಯ ವರ್ತನೆ ಎಂದು ಅವರನ್ನು ಅಮಾನತ್ತು ಮಾಡಲಾಗಿದೆ. ಇದೀಗ ಅವರ ವಿರುದ್ಧ ತನಿಖೆಗೆ ಹಕ್ಕುಚ್ಯುತಿ ಸಮಿತಿಗೆ ನೀಡಿದ್ದು ಸ್ಪೀಕರ್ ಕಾಗೇರಿ ಅವರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆಂದು ಶಿವಕುಮಾರ್ ದೂರಿದರು. ಸಂಗಮೇಶ್ ಮೇಲೆ ಸುಳ್ಳು ಕೇಸು ದಾಖಲಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಮಾ.13ಕ್ಕೆ ಶಿವಮೊಗ್ಗ ಚಲೋ ಹಮ್ಮಿಕೊಂಡಿದ್ದೇವೆ ಎಂದರು.
‘ನಾಳೆಯೇ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನೂರಕ್ಕೆ ನೂರು ನಾವು ಅಧಿಕಾರಕ್ಕೆ ಬರಲಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗ ನಿಮಗೂ ಸ್ಥಾನಮಾನ ನೀಡಲಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಕೆಲಸ ಮಾಡಬೇಕು. ಎಲ್ಲರೂ ಶ್ರಮಿಸಿದರೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ







