ಪಿಂಚಣಿ ಪಾವತಿಯಲ್ಲಿ ವಿಳಂಬ ಕುರಿತು ವರದಿ: ಕೇಂದ್ರ, ಜಾರ್ಖಂಡ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ಎನ್‌ಎಚ್‌ಆರ್‌ಸಿ

ಹೊಸದಿಲ್ಲಿ, ಮಾ. 9: ಜಾರ್ಖಂಡ್‌ನಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳ ಬಟವಾಡೆಯಲ್ಲಿ ಐದು ತಿಂಗಳು ವಿಳಂಬವಾದ ಕುರಿತು Scroll.in ವರದಿ ಪ್ರಕಟಿಸಿದ ವಾರಗಳ ಬಳಿಕ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಜಾರ್ಖಂಡ್ ಸರಕಾರ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.
ಅಲ್ಲದೆ ಪಿಂಚಣಿ ನೀಡಲು ವಿಳಂಬವಾಗಿರುವ ಕುರಿತು ವಿಸ್ತೃತ ವರದಿಯನ್ನು 6 ವಾರಗಳ ಒಳಗೆ ಸಲ್ಲಿಸುವಂತೆ ಸೂಚಿಸಿದೆ.
ಮಾರ್ಚ್ 2ರಂದು Scroll.in ‘‘ನೋ ಪೆನ್ಶನ್ಸ್ ಫಾರ್ ಫೈವ್ ಮಂತ್ಸ್: ಹೌ ಚಾರ್ಖಂಡ್ಸ್ ಪೂವರ್ಸ್ ಲೆಫ್ಟ್ ಪೂವರರ್ ವೇರ್ ಡ್ಯೂರಿಂಗ್ ದಿ ಪೆಂಡಮಿಕ್’’ ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಬಡ ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರಿಗೆ 2020 ಜುಲೈಯಿಂದ ಕನಿಷ್ಠ 5 ತಿಂಗಳಿಂದ ಪ್ರತಿ ತಿಂಗಳ ಪಿಂಚಣಿ 1,000 ರೂಪಾಯಿಯಂತೆ 10 ಲಕ್ಷ ರೂಪಾಯಿಯನ್ನು ಒದಗಿಸಲು ರಾಜ್ಯ ಸರಕಾರ ಹೇಗೆ ವಿಫಲವಾಗಿದೆ ಎಂದು ಬೆಳಕು ಚೆಲ್ಲಿತ್ತು. ರಾಜ್ಯ ಸರಕಾರಗಳಿಗೆ ಸೂಕ್ತ ಸಮಯಲ್ಲಿ ಕೋವಿಡ್ ಪರಿಹಾರ ನಿಧಿಯನ್ನು ಕಳುಹಿಸಲು ಸರಕಾರ ವಿಫಲವಾದ ಬಳಿಕ 2020 ಎಪ್ರಿಲ್‌ನಿಂದ ಜೂನ್‌ವರೆಗೆ ಎರಡು ತಿಂಗಳು ಎರಡು ಕಂತಿನಲ್ಲಿ 1,000 ರೂಪಾಯಿಯನ್ನು ಕೋವಿಡ್ ಪರಿಹಾರ ಪಾವತಿಗೆ ಕೇಂದ್ರ ಸರಕಾರದ ಪಿಂಚಣಿ ನಿಧಿಯ ಪಾಲನ್ನು ಬಳಸಿದ ಕಾರಣದಿಂದ ಸಾಮಾಜಿಕ ಭದ್ರತಾ ಪಿಂಚಣಿ ನೀಡಲು ವಿಳಂಬವಾಯಿತು ಎಂದು ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಪತ್ತು ನಿರ್ವಹಣೆಗೆ ಮೀಸಲಿರಿಸಿದ್ದ ನಿಧಿಯಿಂದ ಕೋವಿಡ್ ಪರಿಹಾರ ಪಾವತಿಸಲಾಗಿತ್ತು. ಕೇಂದ್ರದ ಪಿಂಚಣಿ ನಿಧಿಯ ಪಾಲನ್ನು ಸ್ವೀಕರಿಸಲು ವಿಳಂಬವಾದ ಕಾರಣದಿಂದ ಬಹುಶಃ ಪಿಂಚಣಿ ನೀಡಲು ವಿಳಂಬವಾಗಿರಬಹುದು ಎಂದು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ರವಾನಿಸಿದ ನೋಟಿಸಿನಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದೆ. ಅಲ್ಲದೆ ಒಂದು ವೇಳೆ ಸತ್ಯವಾಗಿದ್ದರೆ, ವರದಿಯು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆಯನ್ನು ಎತ್ತುತ್ತದೆ ಎಂದು ಹೇಳಲಾಗಿದೆ. ನಿಗದಿತ ಉದ್ದೇಶಕ್ಕೆ ಕೇಂದ್ರದಿಂದ ಸ್ವೀಕರಿಸಲಾದ ಹಣವನ್ನು ಇನ್ನೊಂದು ಉದ್ದೇಶಕ್ಕೆ ಹೇಗೆ ಬಳಸಿರುವ ಹಾಗೂ ಇದರ ಪರಿಣಾಮವಾಗಿ ಬಡ ಜನರಿಗೆ ಬದುಕಲು ಬೇಕಾದ ಮೂಲಭೂತ ಅವಶ್ಯಕತೆಗಳನ್ನು ನಿರಾಕರಿಸಿರುವ ಬಗ್ಗೆ ಆಯೋಗ ಆತಂಕಗೊಂಡಿದೆ ಎಂದು ರಾಷ್ಟೀಯ ಮಾನವ ಹಕ್ಕು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.







