ಮಾರಿಶಸ್ ಸಮುದ್ರದಲ್ಲಿ ತಳಕ್ಕೆ ತಾಗಿ ತೈಲ ಹಡಗು ಸ್ತಬ್ಧ
ಪೋರ್ಟ್ ಲೂಯಿಸ್ (ಮಾರಿಶಸ್), ಮಾ. 9: ಪೂರ್ವ ಆಫ್ರಿಕದ ದ್ವೀಪ ದೇಶ ಮಾರಿಶಸ್‌ಗೆ ಹೊಂದಿಕೊಂಡ ಹಿಂದೂ ಮಹಾಸಾಗರದಲ್ಲಿ 130 ಟನ್ ತೈಲವನ್ನು ಹೊತ್ತ ಚೀನಾದ ಹಡಗೊಂದು ಸಾಗರದ ತಳಕ್ಕೆ ತಾಗಿ ಸ್ಥಗಿತಗೊಂಡಿದೆ. ಹಡಗನ್ನು ಸಂಚಾರಕ್ಕೆ ಮುಕ್ತಗೊಳಿಸುವುದಕ್ಕಾಗಿ ಮಾರಿಶಸ್ ತನ್ನ ತಟ ರಕ್ಷಣಾ ಪಡೆ ಮತ್ತು ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ.
ಇದು ಮಾರಿಶಸ್ ಜಲಪ್ರದೇಶದಲ್ಲಿ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಡೆದ ಎರಡನೇ ಹಡಗು ಅಪಘಾತವಾಗಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ, ತೈಲ ಟ್ಯಾಂಕರೊಂದು ಹವಳದ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, 1,000 ಟನ್ ತೈಲ ಸಾಗರಕ್ಕೆ ಸೋರಿಕೆಯಾಗಿತ್ತು.
ಹಡಗಿನಲ್ಲಿ ಯಾವುದೇ ಸೋರಿಕೆಯಾಗಿಲ್ಲ ಹಾಗೂ ಹಡಗು ಒಡೆದಿಲ್ಲ ಎನ್ನುವುದನ್ನು ಮುಳುಗುಗಾರರು ಖಚಿತಪಡಿಸಿದ್ದಾರೆ ಎಂದು ಮಾರಿಶಸ್‌ನ ಮೀನುಗಾರಿಕಾ ಸಚಿವ ಸುಧೀರ್ ಮಧೂ ಸೋಮವಾರ ಹೇಳಿದ್ದಾರೆ. ತೈಲವನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
Next Story





