ತಮಿಳುನಾಡಿನಲ್ಲಿ ಎಸ್ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡ ಕಮಲ್ ಹಾಸನ್ ಪಕ್ಷ: ವರದಿ

ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮಯ್ಯಂ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು news18tamil ಮಾಧ್ಯಮವು ವರದಿ ಮಾಡಿದೆ.
ಈ ಕುರಿತಾದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಡಿಪಿಐ ತಮಿಳುನಾಡು ವಕ್ತಾರ ಅಬ್ದುಲ್ ಮಜೀದ್, "ನಾವು ಒಟ್ಟು 25 ಸೀಟುಗಳ ಬೇಡಿಕೆಯಿಟ್ಟಿದ್ದೆವು. ಕೊನೆಗೆ 18 ಸೀಟುಗಳು ನೀಡುತ್ತೇವೆಂದು ಒಪ್ಪಿಗೆ ನೀಡಿದ್ದಾರೆ" ಎಂದು ಹೇಳಿಕೆ ನೀಡಿದ್ದಾಗಿ ವರದಿಗಳು ತಿಳಿಸಿವೆ.
ಈ ಹಿಂದೆ ಎಸ್‌ಡಿಪಿಐ ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಲ್ ಮುನ್ನೇಟ್ರ ಕಝಗಮ್ (ಎಎಂಎಂಕೆ) ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಆ ಪಕ್ಷದ ನಾಯಕರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಅಥವಾ ಬಿಜೆಪಿ ತಮ್ಮ ರಾಜಕೀಯ ಯೋಜನೆಗಳನ್ನು ನಿಯಂತ್ರಿಸಬಹುದು ಎಂದು ಭಾವಿಸಿ ಮೈತ್ರಿಯನ್ನು ತೊರೆದಿದ್ದಾರೆ ಎಂದು timesnow.com ವರದಿಯಲ್ಲಿ ಉಲ್ಲೇಖಿಸಲಾಗಿದೆ.
234 ಸ್ಥಾನಗಳಿಗೆ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.