ಭಟ್ಕಳ : ಮಾ.12ರಿಂದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ
ಭಟ್ಕಳ : ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ವತಿಯಿಂದ ಮಾ.12,13,14 ರಂದು ವೈ.ಎಂ.ಎಸ್.ಎ ತಾಲೂಕು ಕ್ರೀಡಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಫೆಡರೇಶನ್ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್ ಮಾಹಿತಿ ನೀಡಿದ್ದಾರೆ.
ಅವರು ಮಂಗಳವಾರ ರಾತ್ರಿ ವೈ.ಎಂ.ಎಸ್.ಎ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಮಾರ್ಚ್ 12 ರಂದು ಸಂಜೆ 5 ಗಂಟೆಗೆ ಚಾಲನೆ ಪಡೆಯಲಿದ್ದು ರಾತ್ರಿ 10ಗಂಟೆಗೆ ಉದ್ಘಾಟನಾ ಸಮಾರಂಭ ಜರಗಲಿದೆ. ಮಾ.14 ರಂದು ರಾತ್ರಿ ಹತ್ತು ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ರಾಷ್ಟ್ರೀಯ ಕಬ್ಬಡ್ಡಿ ಆಯ್ಕೆ ಸಮಿತಿಯ ಬಿ.ಸಿ.ರಮೇಶ, ರೆಫರಿ ಅಸೋಸಿಯೇಶನ್ ಅಧ್ಯಕ್ಚ ಷಣ್ಮುಗಂ ಹಾಗೂ ಭಟ್ಕಳದ ಸ್ಟಾರ್ ಕಬಡ್ಡಿ ಆಟಗಾರ ಇನಾಯತುಲ್ಲಾ ಶಾಬಂದ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಒಟ್ಟು 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಮೂರು ದಿನಗಳ ಪಂದ್ಯಾವಳಿಯಲ್ಲಿ 33 ಪಂದ್ಯಗಳು ನಡೆಯಲಿದ್ದು, ಇದಕ್ಕಾಗಿ ಎರಡು ಕಬಡ್ಡಿ ಕೋರ್ಟ್‍ಗಳನ್ನು ವೈಎಂಎಸ್‍ಎ ಮೈದಾನದಲ್ಲಿ ಸ್ಥಾಪಿಸಲಾಗಿದೆ. ಎರಡು ಪಂದ್ಯಗಳನ್ನು ಏಕಕಾಲದಲ್ಲಿ ಆಡಲಾಗುವುದು. ಭಟ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಅತ್ಯುತ್ತಮ ಮತ್ತು ಪ್ರತಿಭಾವಂತ ಆಟಗಾರರು ಪಂದ್ಯಾವಳಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಪ್ರತಿಯೊಂದು ತಂಡವು ಭಟ್ಕಳ ತಾಲೂಕಿನ ಹೊರಗಿನಿಂದ (ಅಂದರೆ ಜಿಲ್ಲೆಯ ಮೇಲ್ಭಾಗ) ಒಬ್ಬ ಅಥವಾ ಇಬ್ಬರು ಆಟಗಾರರನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಅವಕಾಶ ನೀಡಿದ ಹನ್ನೆರಡು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ಐದು ಪಂದ್ಯಗಳನ್ನು ಆಡಬೇಕಾಗುತ್ತದೆ. ಹೆಚ್ಚುವರಿ ಅಂಕಗಳ ಆಧಾರದ ಮೇಲೆ ತಂಡಗಳು ಸೆಮಿಫೈನಲ್ ಮತ್ತು ಫೈನಲ್ ತಲುಪಲು ಸಾಧ್ಯವಾಗುತ್ತದೆ.
ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 75,000 ರೂ., ರನ್ನರ್ಸ್ ಅಪ್‍ಗೆ 40,000 ರೂ. ಮೂರನೇ ಮತ್ತು ನಾಲ್ಕನೇ ಸ್ಥಾನ ದಲ್ಲಿರುವ ತಂಡಕ್ಕೆ 10,000 ರೂ. ಮತ್ತು ಟ್ರೋಫಿ ನೀಡಲಾಗುವುದು. ಅತ್ಯುತ್ತಮ ಆಲ್ ರೌಂಡರ್ ಪ್ಲೇಯರ್‍ಗೆ 10,000 ರೂ. ನಗದು ಮತ್ತು ಅತ್ಯುತ್ತಮ ರೈಡರ್ ಮತ್ತು ಬೆಸ್ಟ್ ಕ್ಯಾಚರ್‍ಗೆ 5,000 ರೂ ನಗದು ಬಹುಮಾನ ನೀಡಲಾಗುವುದು. 12 ತಂಡಗಳಲ್ಲಿ ಆಯ್ಕೆದಾರರು ಉನ್ನತ ಆಟಗಾರರನ್ನು ಮಾತ್ರ ಆಯ್ಕೆ ಮಾಡಿರುವುದರಿಂದ, ಪಂದ್ಯಗಳು ಅತ್ಯಂತ ಸ್ಪರ್ಧಾತ್ಮಕ ಮತ್ತು ಆಸಕ್ತಿದಾಯಕವಾಗಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಫೆಡರೇಶನ್ ಉಪಾಧ್ಯಕ್ಷ ಇಸ್ಮಾಯಿಲ್ ಅಂಜುಮ್ ಗಂಗಾವಳಿ ನದ್ವಿ, ಸಾಜಿದ್ ಮಿಸ್ಬಾ ಹಾಗೂ ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ತಲ್ಹಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







