ಗೋ ಸಂರಕ್ಷಣೆಗೆ ನಾವು ಬದ್ಧ: ಸುದರ್ಶನ್ ಮೂಡುಬಿದಿರೆ
ಮಂಗಳೂರು, ಮಾ.10: ಗೋಶಾಲೆ ನಡೆಸಲು ಮಾನದಂಡವಿದೆ. ಆದರೆ ಕಪಿಲಾ ಗೋಶಾಲೆಯು ಸರಕಾರಿ ಜಾಗದಲ್ಲಿರುವುದರಿಂದ ಅದನ್ನು ತೆರವುಗೊಳಿಸಲಾಗಿದೆ. ಅಲ್ಲಿನ ಗೋವುಗಳನ್ನು ಅವರಿಂದ ಸಾಕಲು ಸಾಧ್ಯವಿಲ್ಲ ಎಂದಾದರೆ ಅದನ್ನು ಸಂರಕ್ಷಿಸಲು ಸಂಘಟನೆ ಬದ್ಧವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ಕೆಂಜಾರಿನಲ್ಲಿ ತಮ್ಮ ಖಾಸಗಿ ಜಾಗದಲ್ಲಿ ಗೋ ಶಾಲೆ ಮಾಡಿದ್ದು ಎಂದು ಕಪಿಲಾ ಗೋಶಾಲೆಯ ಮುಖ್ಯಸ್ಥರು ಹೇಳಿದ್ದರು. ಆದರೆ ಖಾಸಗಿ ಜಾಗವನ್ನು ತೋರಿಸಲು ಅವರು ವಿಫಲರಾಗಿದ್ದಾರೆ ಎಂದರು.
ಅವರ ನಾಲ್ಕು ಸೆಂಟ್ಸ್ ಜಾಗ ಮಾತ್ರ ಇದ್ದು, ಉಳಿದ ಜಾಗ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರಕ್ಕಾಗಿ ಮೀಸಲಿಟ್ಟ ಸರಕಾರಿ ಜಾಗ. ಈ ಹಿಂದೆ ಅದು ಕಪಿಲಾ ಗೋಶಾಲೆಯ ಖಾಸಗಿ ಜಾಗವೆಂದು ತಿಳಿದು ಹಿಂದಿನ ಮೇಯರ್ ಹಾಗೂ ಶಾಸಕರು ಸಹಾಯಧನವನ್ನೂ ನೀಡಿದ್ದಾರೆ. ಆದರೆ ಇದೀಗ ಅದು ಸರಕಾರಿ ಜಾಗವೆಂದು ತಿಳಿದಾದ ಮೇಲೆ ಜಿಲ್ಲಾಡಳಿತದಿಂದ ಕಳೆದ ಆರು ತಿಂಗಳಿನಿಂದ ನೋಟೀಸು ನೀಡಿ ಖಾಲಿ ಮಾಡಲು ತಿಳಿಸಲಾಗಿತ್ತು. ಹಾಗಿದ್ದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಅಕ್ರಮ ಗೋಶಾಲೆ ತೆರವು ಮಾಡುವ ಮುಂಚಿತ ವಾಗಿಯೂ ಅವರು ಬೇರೆಡೆಗೆ ಗೋವುಗಳನ್ನು ಸ್ಥಳಾಂತರಿಸುವುದಾಗಿ ಹೇಳಿದ್ದರೂ ಮಾಡಿಲ್ಲ. ಬದಲಾಗಿ ಅವರ ಬೆಂಬಲಿಗರು ಸಂಸದರು ಹಾಗೂ ಶಾಸಕರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಗೋಶಾಲೆಯನ್ನು ಮುಂದಿಟ್ಟು ಅವರು ಸಂಘಟನೆಯ ವಿಘಟನೆಗೆ ಮುಂದಾಗಿರುವ ಅನುಮಾನ ಕಾಡುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ನಡುವೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಜೆಟ್‌ನಲ್ಲಿ ಯಾವುದೇ ತೆರಿಗೆ ಹೆಚ್ಚಿಸದೆ ಎಲ್ಲಾ ವಲಯಗಳಿಗೆ ಆದ್ಯತೆ ನೀಡಿ, ಎಲ್ಲಾ ಜಿಲ್ಲೆಗಳಿಗೂ ಸಮಾನತೆಯೊಂದಿಗೆ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.







