ರಂಗಕರ್ಮಿ ಐ.ಕೆ.ಬೊಳುವಾರಿಗೆ ರಂಗ-ಭಾಸ್ಕರ ಪ್ರಶಸ್ತಿ ಪ್ರದಾನ

ಮಂಗಳೂರು, ಮಾ.10: ರಂಗ ನಿರ್ದೇಶಕ ದಿ. ಭಾಸ್ಕರ ನೆಲ್ಲಿತೀರ್ಥ ಅವರ ನೆನಪಿನಲ್ಲಿ ಕೊಡಮಾಡುವ 2021ನೆ ಸಾಲಿನ ‘ರಂಗಭಾಸ್ಕರ’ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಅವರಿಗೆ ನಗರದ ಪುರಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಕಳೆದ 42 ವರ್ಷಗಳಿಂದ ರಂಗಭೂಮಿಗೆ ಸಂಬಂಧಿಸಿ ನಟನೆ, ನಿರ್ದೇಶನ, ನಾಟಕ ರಚನೆ, ನೇಪಥ್ಯ, ಪ್ರಕಟನೆ, ತರಬೇತಿ, ಸಂಘಟನೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಐಕೆ ಬೊಳುವಾರು ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಪ್ರಶಸ್ತಿಗಳನ್ನು ನಯವಾಗಿ ಸ್ವೀಕರಿಸುವ ನಾನು ಮಕ್ಕಳ ನಾಟಕಗಳಿಗೆ ಪ್ರೋತ್ಸಾಹ ನೀಡುವ ರಂಗ ಸಂಗಾತಿ ಸಂಘಟನೆಯ ಕೋರಿಕೆಯ ಮೇರೆಗೆ ಪ್ರಶಸ್ತಿ ಸ್ವೀಕರಿಸಿದೆ ಎಂದರಲ್ಲದೆ ಮಕ್ಕಳ ನಾಟಕ ರಚನೆ, ಪ್ರದರ್ಶನದಿಂದ ಮಕ್ಕಳು ಭವಿಷ್ಯ ದಲ್ಲಿ ಒಳ್ಳೆಯ ನಾಟಕಕಾರ, ನಟ, ನಿರ್ದೇಶಕ ಅಥವಾ ಒಳ್ಳೆಯ ಪ್ರೇಕ್ಷಕರಾಗಲಿ ಎಂದು ಆಶಿಸಿದರು. ಎಂಆರ್‌ಪಿಎಲ್-ಒಎನ್‌ಜಿಸಿ ಡಿಎಂಒ ವೀಣಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು.
ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 12ನೆ ವಾರ್ಷಿಕೋತ್ಸವವು ನಡೆಯಿತು. ಅಲ್ಲದೆ ‘ಮಿನುಗೆಲೆ ಮಿನುಗೆಲೆ ನಕ್ಷತ್ರ’ ಎಂಬ ಮಕ್ಕಳ ನಾಟಕ ಮತ್ತು ‘ದಾಟ್ಸ ಆಲ್ ಯುವರ್ ಆನರ್’ ಕನ್ನಡ ನಾಟಕ ಪ್ರದರ್ಶನಗೊಂಡಿತು.







