ಅನ್ನಭಾಗ್ಯ ಯೋಜನೆ ಅಕ್ಕಿ ಕಳ್ಳಸಾಗಣೆ: ಆರೋಪಿಗಳಿಗೆ ಜಾಮೀನು ನೀಡಲು ಹೈಕೋರ್ಟ್ ನಕಾರ

ಬೆಂಗಳೂರು, ಮಾ.10: ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಪ್ರಕರಣದಲ್ಲಿ ನೀರಿಕ್ಷಣಾ ಜಾಮೀನು ಕೋರಿ ಬಳ್ಳಾರಿಯ ಶಬರಯ್ಯ ಹಾಗೂ ತುಮಕೂರಿನ ಜಾವೇದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ. ಇದೇ ವೇಳೆ ಪ್ರಕರಣದ ನಾಲ್ಕನೆ ಆರೋಪಿ ಮಹಿಳೆಗೆ ಷರತ್ತುಬದ್ಧ ಜಾಮೀನು ಪಡೆದುಕೊಳ್ಳಲು ಅವಕಾಶ ನೀಡಿದೆ.
ಲಾರಿ ಮಾಲಕಳಾಗಿರುವ ಜರೀದಾ ಬೇಗಂ ಅವರಿಗೆ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ: ಬಳ್ಳಾರಿಯ ಆಹಾರ ಶಿರಸ್ತೇದಾರ್ ರವಿಕುಮಾರ್ ವಿ. ರಾಥೋಡ್ ನೀಡಿದ ಮಾಹಿತಿ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು 2020ರ ನ.9ರಂದು ನಗರದ ಹೊರವಲಯದ ಬೆಂಗಳೂರು ಹೆದ್ದಾರಿಯಲ್ಲಿರುವ ಹಲಕುಂದಿ ಗ್ರಾಮದ ಸರಕಾರಿ ಶಾಲೆ ಮುಂಭಾಗ ಲಾರಿಯೊಂದನ್ನು ತಡೆದು ಪರಿಶೀಲಿಸಿದ್ದರು. ಈ ವೇಳೆ ಲಾರಿಯಲ್ಲಿ ಅನ್ನಭಾಗ್ಯ ಯೋಜನೆ ಅಡಿ ವಿತರಿಸಬೇಕಿದ್ದ 8.50 ಲಕ್ಷ ಮೌಲ್ಯದ ಅಕ್ಕಿ ಚೀಲಗಳು ಪತ್ತೆಯಾಗಿದ್ದವು. ಇದರಲ್ಲಿ ಬಳ್ಳಾರಿಯ ಗುಗ್ಗರಹಳ್ಳಿ ನಿವಾಸಿ ಶಬರಯ್ಯ, ತುಮಕೂರಿನ ಜಾವೇದ್ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.







