ನಕಲಿ ವಿಡಿಯೋ ಆಗಿದ್ದರೆ ತನಿಖೆ ಏಕೆ ಬೇಕು: ಡಿ.ಕೆ.ಶಿವಕುಮಾರ್ ಪ್ರಶ್ನೆ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ಬೆಂಗಳೂರು, ಮಾ.10: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಸಿಡಿಯಲ್ಲಿರುವ ವಿಡಿಯೋ ನಕಲಿ ಆಗಿದ್ದರೆ, ತನಿಖೆಯ ಅಗತ್ಯವಾದರೂ ಏನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿರುವುದಾಗಿ ಬಿಜೆಪಿ ಮುಖಂಡರು ಮಾಡುತ್ತಿರುವ ಆರೋಪದ ಕುರಿತು ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿರುಗೇಟು ನೀಡಿದರು.
ರಾಜಕಾರಣ ಅಂದರೆ ಅಲ್ಲಿ ಷಡ್ಯಂತ್ರಗಳು ಸಾಮಾನ್ಯ. ನಾವು ಸರಿ ಇದ್ದರೆ ಯಾಕೆ ಯಾರೋ ಬಂದು ನಮ್ಮನ್ನು ಸಿಕ್ಕಿಸಿ ಹಾಕುತ್ತಾರೆ? ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ. ಮಾಧ್ಯಮಗಳ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ. ಬೆಳಗಾವಿ ಒಂದು ರಾಜ್ಯ ಎಂದಿದ್ದಾರೆ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಾಗಬೇಕಿತ್ತು. ಕನ್ನಡಿಗರ ಬಗ್ಗೆಯೂ ಅವಹೇಳನಕಾರಿ ಮಾತನಾಡಿದ್ದಾರೆ. ಆದರೂ, ಕನ್ನಡಿಗರು ಯಾಕೆ ಸುಮ್ಮನಿದ್ದಾರೆ ಅಂತ ಗೊತ್ತಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.
ಷಡ್ಯಂತ್ರ ಮಾಡೋಕೆ ನಾವೇನು ಇವರಿಗೆ ಹಾಲ್ ಬುಕ್ ಮಾಡಿ, ಇವರ ಶರ್ಟ್, ಪ್ಯಾಂಟು ಬಿಚ್ಚಿ ಎಂದು ಹೇಳಿ ಕೊಟ್ಟಿದ್ವಾ? ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಎಂದು ಹೇಳಿಕೊಟ್ಟಿದ್ವಾ? ಇದೇನು ಸಿನಿಮಾನ ನಾವು ಸ್ಕ್ರಿಪ್ಟ್ ಕೊಟ್ಟಿದ್ವಾ? ಮಾಧ್ಯಮಗಳ ಬಗ್ಗೆಯೂ ಲಘುವಾಗಿ ಮಾತನಾಡಿ ಎಂದು ಹೇಳಿಕೊಟ್ವಾ? ಇವರು ಮಾಡುವ ಆರೋಪಗಳನ್ನು ಕೇಳಲು ರಾಜ್ಯದ ಜನರು ಏನು ದಡ್ಡರಾ? ಎಂದು ರಮೇಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪ ಮಾಡದೆ ಅವರು ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿ ಹಾಗೂ ನಾನು ಒಂದು ಕಾಲದಲ್ಲಿ ಚೆನ್ನಾಗಿದ್ದೆವು. ಆತ ಪಕ್ಷ ಬಿಟ್ಟು ಹೋದ ಬಳಿಕ ನನಗೂ ಅವನಿಗೂ ಸಂಪರ್ಕವಿಲ್ಲ. ಆತ ಖಿನ್ನತೆಗೆ ಒಳಗಾಗಿ ಏನೇನೊ ಹೇಳಿಕೆ ನೀಡುತ್ತಿದ್ದಾನೆ ಎಂದ ಅವರು, ಇದೇ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧವೂ ಕಿಡಿಗಾರಿದರು.
ಸೋಮಶೇಖರ್ 20 ವರ್ಷ ಕಾಂಗ್ರೆಸ್‍ನಲ್ಲಿದ್ದರು. ಅವರು ಏನೇನು ಮಾಡಿದ್ದಾರೆ ಹೇಳಲಿ. ಬಿಜೆಪಿಯವರಿಗಿಂತ ನಾವು ಅವರ ಜೊತೆ ಹೆಚ್ಚು ಸಮಯ ಕಳೆದಿದ್ದೇವೆ. ಅವರ ಜೊತೆಯಲ್ಲಿ ಇರುವವರನ್ನೆಲ್ಲ ಸೇರಿಸಿಕೊಂಡು ಬಂದು ಸುದ್ದಿಗೋಷ್ಠಿ ಮಾಡಿ ನಮ್ಮ ಬಗ್ಗೆ ಏನೇನು ವಿಷಯಗಳಿವೆಯೋ ಅದನ್ನೆಲ್ಲ ಮುಂದಿಡಲಿ ಎಂದು ಶಿವಕುಮಾರ್ ಸವಾಲು ಹಾಕಿದರು.
ಬಿಜೆಪಿ ಪಕ್ಷದ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿಯ ಸಿಡಿ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಕೆಲವರು ಬ್ಲಾಕ್‍ಮೇಲ್ ಮಾಡಿ ಸಚಿವರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಮೈತ್ರಿ ಸರಕಾರ ಬೀಳಿಸಲು ಶಾಸಕರನ್ನು ಒಂದೆಡೆ ಸೇರಿಸಲು ಯೋಗೇಶ್ವರ್ 9 ಕೋಟಿ ರೂ.ಸಾಲ ಮಾಡಿರುವುದಾಗಿಯೂ ಒಬ್ಬ ಮುಖಂಡರು ಹೇಳಿದ್ದರು. ಈ ಎಲ್ಲ ವಿಚಾರಗಳ ಬಗ್ಗೆಯೂ ತನಿಖೆಯಾಗಲಿ ಎಂದು ಶಿವಕುಮಾರ್ ಒತ್ತಾಯಿಸಿದರು.







