‘ಕ್ವಾಡ್’ ಶೃಂಗಸಭೆಯಲ್ಲಿ ಕೊರೋನ, ಹವಾಮಾನ ಬದಲಾವಣೆ ಬಗ್ಗೆ ಚರ್ಚೆ: ಅಮೆರಿಕ
ವಾಶಿಂಗ್ಟನ್, ಮಾ. 10: ಭಾರತ, ಆಸ್ಟ್ರೇಲಿಯ, ಜಪಾನ್ ಮತ್ತು ಅಮೆರಿಕಗಳನ್ನೊಳಗೊಂಡ ನಾಲ್ಕು ದೇಶಗಳ ಸಂಘಟನೆ ‘ಕ್ವಾಡ್’ನ ಮೊದಲ ಶೃಂಗ ಸಮ್ಮೇಳನ ಶುಕ್ರವಾರ ಆನ್‌ಲೈನ್ ಮೂಲಕ ನಡೆಯಲಿದೆ.
ಕೋವಿಡ್-19 ಸಾಂಕ್ರಾಮಿಕ ಒಡ್ಡಿದ ಸವಾಲು, ಆರ್ಥಿಕ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಶ್ವೇತಭವನ ಮಂಗಳವಾರ ತಿಳಿಸಿದೆ.
‘‘ಇದು ಅಧ್ಯಕ್ಷ ಜೋ ಬೈಡನ್‌ರ ಮೊದಲ ಬಹುಪಕ್ಷೀಯ ಸಮಾವೇಶವಾಗಿದೆ. ಹಿಂದೂಮಹಾಸಾಗರ-ಪೆಸಿಫಿಕ್ ವಲಯದಲ್ಲಿರುವ ನಮ್ಮ ಮಿತ್ರರು ಮತ್ತು ಭಾಗೀದಾರದೊಂದಿಗಿನ ಸಹಕಾರಕ್ಕೆ ನಾವು ಎಷ್ಟು ಮಹತ್ವ ಕೊಡುತ್ತೇವೆ ಎನ್ನುವುದನ್ನು ಇದು ತೋರಿಸುತ್ತದೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಶುಕ್ರವಾರ ಬೆಳಗ್ಗೆ ನಡೆಯಲಿರುವ ಕ್ವಾಡ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಯೊಶಿಹಿಡೆ ಸುಗ, ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾಗವಹಿಸಲಿದ್ದಾರೆ.





