ಸರಕಾರದ ವಿರುದ್ಧ ಬರೆಯುವವರನ್ನು ತಟಸ್ಥಗೊಳಿಸುವ ಕುರಿತು ಸಚಿವರ ತಂಡದ ಸಲಹೆ ಆಘಾತಕಾರಿ: ಎಡಿಟರ್ಸ್ ಗಿಲ್ಡ್

ಹೊಸದಿಲ್ಲಿ, ಮಾ.10: ಸರಕಾರದ ವಿರುದ್ಧ ಬರೆಯುವ ವ್ಯಕ್ತಿಗಳನ್ನು ತಟಸ್ಥಗೊಳಿಸುವ ಕ್ರಮದ ಬಗ್ಗೆ ಸಚಿವರ ತಂಡ (ಜಿಒಎಂ) ಸಲಹೆ ನೀಡಿದೆ ಎಂಬ ವರದಿ ನಂಬಲಸಾಧ್ಯ ಮತ್ತು ಆಘಾತಕಾರಿ ಎಂದು ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ(ಇಜಿಐ) ಹೇಳಿದೆ.
ಮಾಧ್ಯಮಗಳಲ್ಲಿ ವ್ಯಕ್ತವಾಗುವ ಟೀಕೆ ಅಥವಾ ಪ್ರಶ್ನೆಗಳ ವಿರುದ್ಧ ಸರಕಾರದ ನಿರ್ದಯ , ನಿಷ್ಟುರ ಮತ್ತು ಕಠೋರ ನಿಲುವು ಹೆಚ್ಚುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ .ಪತ್ರಿಕಾ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಸೂಚ್ಯಂಕ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದ್ದಾಗ ಏಕಾಏಕಿ 2020ರ ಮಧ್ಯಭಾಗದಲ್ಲಿ 5 ಕ್ಯಾಬಿನೆಟ್ ಸಚಿವರು ಹಾಗೂ 4 ಸಹಾಯಕ ಸಚಿವರನ್ನೊಳಗೊಂಡಿರುವ ಜಿಒಎಂ ಅನ್ನು ಸರಕಾರ ರಚಿಸಿದೆ ಎಂದು ಇಜಿಐ ಹೇಳಿದೆ.
‘ಸರಕಾರದ ಸಂವಹನದ ಕುರಿತು ಸಚಿವರ ತಂಡದ ವರದಿ’ ಎಂಬ ಶೀರ್ಷಿಕೆಯ ವರದಿಯಲ್ಲಿ ‘ ಕೇಂದ್ರ ಸರಕಾರದ ಕುರಿತು ಸುಳ್ಳು ವಿವರಣೆ ಪ್ರಸಾರ ಮಾಡುತ್ತಿರುವ ಕೆಲವು ಅಂತರಾಷ್ಟ್ರೀಯ ಮಾಧ್ಯಮ ಹಾಗೂ ‘ದಿ ವೈರ್, ಸ್ಕ್ರಾಲ್’ನಂತಹ ಭಾರತೀಯ ಡಿಜಿಟಲ್ ಸುದ್ದಿವೇದಿಕೆಗಳ ಪ್ರಭಾವವನ್ನು ನಿಭಾಯಿಸಲು ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ಸೂಚಿಸಲಾಗಿದೆ. ಜೊತೆಗೆ, ಸರಕಾರವನ್ನು ಬೆಂಬಲಿಸುವ ಪತ್ರಕರ್ತರು, ವೆಬ್‌ಸೈಟ್‌ಗಳು ಹಾಗೂ ಮಾಹಿತಿದಾರರಿಗೆ ಪ್ರೋತ್ಸಾಹ ನೀಡಬೇಕು. ಸರಕಾರವನ್ನು ಟೀಕಿಸುವವರನ್ನು ಗುರುತಿಸಿ, ಪತ್ತೆಹಚ್ಚಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿ ಸಲಹೆ ಮಾಡಿದೆ. ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ, ಸರಕಾರದ ವಿರುದ್ಧ ಆಧಾರರಹಿತ ಸುದ್ಧಿ ಬರೆಯುವ ಜನರನ್ನು ನಿಯಂತ್ರಿಸಿ ತಟಸ್ಥಗೊಳಿಸಲು ಅನುಕೂಲವಾಗುವ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಸಚಿವರೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂಬ ವರದಿ ಅತ್ಯಂತ ಆಘಾತಕಾರಿ ಎಂದು (ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯ ಹೆಸರೆತ್ತದೆ) ಎಡಿಟರ್ಸ್ ಗಿಲ್ಡ್ ಹೇಳಿದೆ. ಸರಕಾರದ ಅಭಿಪ್ರಾಯವನ್ನು ವಿರೋಧಿಸುವ ಸಾಹಿತಿಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸಿ , ನಿಗಾ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸುವ ಸೂಚನೆಯನ್ನು ಜಿಒಎಂ ವರದಿ ನೀಡಿದೆ. ಸುಳ್ಳು ಸುದ್ಧಿ ಎಂದರೇನು , ಅದನ್ನು ಹೇಗೆ ಗುರುತಿಸುವುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲದೆ ಕೈಗೊಳ್ಳುವ ಕ್ರಮಗಳು ಸರಕಾರದ ವಿರುದ್ಧ ಟೀಕೆ ಮಾಡುವವರ ಬಾಯಿಮುಚ್ಚಿಸುವ ಕ್ರಮ ಮಾತ್ರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ ಎಂಬ ಸಾಂವಿಧಾನಿಕ ಮೌಲ್ಯದ ರಕ್ಷಕನಾಗಿರಬೇಕಾದ ಸರಕಾರವು ಮಾಧ್ಯಮದಲ್ಲಿ ವ್ಯಕ್ತವಾಗುವ ವಿವಿಧ ಅಭಿಪ್ರಾಯಗಳನ್ನು ಸಮಚಿತ್ತದಿಂದ ಸ್ವೀಕರಿಸುವುದಕ್ಕೆ ಬದ್ಧವಾಗಿರಬೇಕು ಎಂದು ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.
ಈ ಮಧ್ಯೆ, ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮವನ್ನು ಎಡಿಟರ್ಸ್ ಗಿಲ್ಡ್ ಖಂಡಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರಡಿ ರೂಪಿಸಲಾಗಿರುವ ಈ ನಿಯಮವು ಭಾರತದಲ್ಲಿ ಮಾಧ್ಯಮ ಸ್ವಾತಂತ್ರವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ ಎಂದು ಎಡಿಟರ್ಸ್ ಗಿಲ್ಡ್‌ನ ಪದಾಧಿಕಾರಿಗಳಾದ ಸೀಮಾ ಮುಸ್ತಫಾ, ಸಂಜಯ್ ಕಪೂರ್ ಮತ್ತು ಅನಂತ್‌ನಾಥ್ ಸಹಿ ಹಾಕಿರುವ ಹೇಳಿಕೆಯಲ್ಲಿ ಟೀಕಿಸಲಾಗಿದೆ.







