‘ಮಾ.13ರಂದು ಶಿವಮೊಗ್ಗ ಚಲೋ’ : ಕಾಂಗ್ರೆಸ್ ಮುಖಂಡರಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪತ್ರ
ಬೆಂಗಳೂರು, ಮಾ.10: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಮತ್ತು ಅವರ ಆರು ಜನ ಕುಟುಂಬ ಸದಸ್ಯರ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಸ್ಥಳೀಯ ಪೊಲೀಸರು ವಿನಾಕಾರಣ ಐಪಿಸಿ ಸೆಕ್ಷನ್ 307, ಜಾತಿ ನಿಂದನೆ ಮತ್ತು ಇತರೆ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ವಿಧಾನಪರಿಷತ್ತು ಸದಸ್ಯರು, ಸಂಸದರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಪತ್ರ ಬರೆದಿರುವ ಉಭಯ ನಾಯಕರು, ಸರಕಾರವು ನಿಯಮ ಬಾಹಿರವಾಗಿ ಹಾಗೂ ಏಕಪಕ್ಷೀಯವಾಗಿ ವಿರೋಧ ಪಕ್ಷದ ಶಾಸಕರ ಮೇಲೆ ಈ ರೀತಿಯ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿರುವುದನ್ನು ಖಂಡಿಸಿ ಮಾ.13ರಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಜಾಥ ಪ್ರಾರಂಭವಾಗಿ ಮೀನಾಕ್ಷಿ ಭವನದ ಎದುರುಗಡೆ ಇರುವ ಸೈನ್ಸ್ ಮೈದಾನದಲ್ಲಿ 3 ಗಂಟೆಗೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಪ್ರತಿಭಟನಾ ರ್ಯಾಲಿಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಂಸದರು, ಶಾಸಕರು, ಮುಂಚೂಣಿ ಘಟಕಗಳ ಎಲ್ಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.





