ಅರಣ್ಯ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ : ಪೊನ್ನಂಪೇಟೆ, ಮತ್ತಿಗೋಡಿನಲ್ಲಿ ಪ್ರತಿಭಟನೆ

ಮಡಿಕೇರಿ,ಮಾ.10 : ಕೊಡಗಿನಲ್ಲಿ ನಿರಂತರವಾಗಿರುವ ಹುಲಿ ದಾಳಿಯನ್ನು ನಿಯಂತ್ರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪೊನ್ನಂಪೇಟೆಯಿಂದ ಮತ್ತಿಗೋಡು ಆನೆ ಶಿಬಿರದವರೆಗೆ ಬೃಹತ್ ವಾಹನ ಜಾಥಾ ನಡೆಸಿದವು. ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಪೊನ್ನಂಪೇಟೆಯ ಸೈಂಟ್ ಆಂಟೋನಿ ಶಾಲೆಯ ಮುಂಭಾಗದಿಂದ ರೈತರ ವಾಹನ ಜಾಥಾ ಸಾಗಿತು. ಬೆಳೆಗಾರರ ಒಕ್ಕೂಟ, ಕೊಡಗು ಹಿತರಕ್ಷಣಾ ವೇದಿಕೆ, ಕೊಡವ ಮಕ್ಕಳ ಕೂಟ, ಕಾಂಗ್ರೆಸ್ ಪಕ್ಷ, ಯುಕೋ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿ ಜಾಥಾದಲ್ಲಿ ಪಾಲ್ಗೊಂಡವು.
ಮಾನವ ಸರಪಳಿ
ವಾಹನ ಜಾಥ ಗೋಣಿಕೊಪ್ಪಲಿಗೆ ಆಗಮಿಸಿದ ನಂತರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರು ‘ಮಾನವ ಸರಪಳಿ’ ರಚಿಸಿ, ಹುಲಿ ಹಾವಳಿಯನ್ನು ತಡೆಗಟ್ಟುವಂತೆ ಸರ್ಕಾರವನ್ನು ಆಗ್ರಹಿಸಿದರು. ಆನೆಚೌಕೂರು ಮೂಲಕ ಮತ್ತಿಗೋಡು ಆನೆ ಶಿಬಿರದಲ್ಲಿರುವ ಅರಣ್ಯ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಸ್ತೆ ತಡೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಹುಲಿ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡನೀಯವೆಂದರು.
'ತಾಳ್ಮೆಯನ್ನು ಪರೀಕ್ಷಿಸಬೇಡಿ'
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರೈತಸಂಘದ ಅಧ್ಯಕ್ಷ ಕಾಡ್ಯಮಡ ಮನು ಸೋಮಯ್ಯ, ಮನುಷ್ಯರ ಪ್ರಾಣವನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ಗುಂಡಿಟ್ಟು ಕೊಲ್ಲುವ ಆದೇಶ ಹೊರಡಿಸಲು ಮೂರು ಮಾನವ ಜೀವಗಳು ಬಲಿಯಾಗಬೇಕಿತ್ತಾ ಎಂದು ಪ್ರಶ್ನಿಸಿದರು. ಕಾನೂನಿಗೆ ಬೆಲೆ ಕೊಡುವ ಮಂದಿಯ ತಾಳ್ಮೆಯನ್ನು ಪರಿಶೀಲಿಸಬೇಡಿ. ಮಾನವ ಜೀವಹಾನಿಗೆ ಕಾರಣವಾಗಿರುವ ಹುಲಿಯನ್ನು ಹಿಡಿಯುವ, ಇಲ್ಲವೆ ಗುಂಡಿಕ್ಕುವ ಕಾರ್ಯವನ್ನು ಶೀಘ್ರ ನಡೆಸದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಸರಕಾರ ಹಾಗೂ ಅರಣ್ಯ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಡಾನೆಗಳ ಹಾವಳಿ ಸೇರಿದಂತೆ ವಿವಿಧ ವನ್ಯ ಮೃಗಗಳ ಹಾವಳಿಯಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಸಿಗದಿರುವ ಈ ಸಮಯದಲ್ಲಿ, ಇದೀಗ ಹುಲಿಯ ಹಾವಳಿಯಿಂದ ಕೆಲಸಗಾರರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಹಲ ಜಾನುವಾರುಗಳನ್ನು ಬಲಿತೆಗೆದುಕೊಂಡ ಹಂತದಲ್ಲೆ ಸರ್ಕಾರ ಹುಲಿಯ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಹುಲಿ ದಾಳಿಗೆ ಮೂವರು ಬಲಿಯಾಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿದ್ದು, ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರವನ್ನು ಸರಕಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್, ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮಚ್ಚಾಮಾಡ ಅನೀಸ್ ಮಾದಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮಾ.11 ರಂದು ಪೊನ್ನಂಪೇಟೆ ಬಂದ್ ಗೆ ಕರೆ
ಹುಲಿ ಕಾರ್ಯಾಚರಣೆ ಕುರಿತು ಅರಣ್ಯ ಇಲಾಖೆಯಿಂದ ಸ್ಪಷ್ಟ ಮಾಹಿತಿ ಲಭ್ಯವಾಗದೆ ಇರುವುದರಿಂದ ಮತ್ತು ಇಲ್ಲಿಯವರೆಗೆ ಮಾನವ ಜೀವ ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯದೇ ಇರುವುದರಿಂದ ಮಾ.11 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೊನ್ನಂಪೇಟೆ ತಾಲ್ಲೂಕು ಬಂದ್ ಗೆ ಕರೆ ನೀಡಲಾಗಿದೆ.










