ದೇಶದಲ್ಲಿ 2.4 ಕೋಟಿ ಕೊರೋನ ಲಸಿಕೆ ಡೋಸ್ ನೀಡಿಕೆ: ಆರೋಗ್ಯ ಇಲಾಖೆ ಮಾಹಿತಿ

ಹೊಸದಿಲ್ಲಿ, ಮಾ.10: ದೇಶದಲ್ಲಿ ಇದುವರೆಗೆ 2.43 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬುಧವಾರ(ಮಾ.10)ರ ಬೆಳಿಗ್ಗೆಯವರೆಗಿನ ಅಂಕಿಅಂಶದ ಪ್ರಕಾರ ದೇಶದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ 2,43,67,906 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಇದರಲ್ಲಿ 71,30,098 ಆರೋಗ್ಯಕ್ಷೇತ್ರದ ಕಾರ್ಯಕರ್ತರು(ಪ್ರಥಮ ಡೋಸ್), 38,90,257 ಆರೋಗ್ಯಕ್ಷೇತ್ರದ ಕಾರ್ಯಕರ್ತರು(ದ್ವಿತೀಯ ಡೋಸ್), 69,36,480 ಮುಂಚೂಣಿ ಕಾರ್ಯಕರ್ತರು(ಪ್ರಥಮ ಡೋಸ್), 4,73,422 ಮುಂಚೂಣಿ ಕಾರ್ಯಕರ್ತರು(ದ್ವಿತೀಯ ಡೋಸ್), 45 ವರ್ಷ ಮೀರಿದವರು 8,33,526 (ಪ್ರಥಮ ಡೋಸ್), 60 ವರ್ಷ ಮೀರಿದವರು 51,04,123 (ಪ್ರಥಮ ಡೋಸ್) ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಬುಧವಾರ ಬೆಳಿಗ್ಗೆವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ 13.5 ಲಕ್ಷ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. 52,351 ಕಡೆಗಳಲ್ಲಿ 10,60,944 ಫಲಾನುಭವಿಗಳು ಪ್ರಥಮ ಡೋಸ್, 2,98,229 ಫಲಾನುಭವಿಗಳು ದ್ವಿತೀಯ ಡೋಸ್ ಲಸಿಕೆ ಪಡೆದಿದ್ದಾರೆ. ಈ ಮಧ್ಯೆ, ಬುಧವಾರ ಬೆಳಿಗ್ಗೆವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನ ಸೋಂಕಿನ 17,921 ಹೊಸ ಪ್ರಕರಣ ಪತ್ತೆಯಾಗಿದ್ದು ಇದರಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಧಿಕ(9,927) ಪ್ರಕರಣ ದಾಖಲಾಗಿದೆ. ನಂತರದ ಸ್ಥಾನದಲ್ಲಿರುವ ಕೇರಳದಲ್ಲಿ 2,316 ಮತ್ತು ಪಂಜಾಬ್‌ನಲ್ಲಿ 1,027 ಹೊಸ ಪ್ರಕರಣ ದಾಖಲಾಗಿದೆ. 8 ರಾಜ್ಯಗಳಲ್ಲಿ ದೈನಂದಿನ ಸೋಂಕು ಪ್ರಕರಣದಲ್ಲಿ ಏರಿಕೆ ಕಂಡುಬಂದಿದೆ. ದೇಶದಲ್ಲಿ ಒಟ್ಟು 1.84 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಇಲಾಖೆಯ ವರದಿ ಹೇಳಿದೆ.







