ಪ್ರಕ್ಷುಬ್ಧತೆ, ದೊಂಬಿಯ ಸಂದರ್ಭ ಇಂಟರ್‌ನೆಟ್ ಸ್ಥಗಿತ ಮಾಡಲಾಗಿದೆ: ಕೇಂದ್ರ ಸರಕಾರ

ಹೊಸದಿಲ್ಲಿ, ಮಾ.10: ಪ್ರಕ್ಷುಬ್ಧತೆ ಮತ್ತು ದೊಂಬಿಯಂತಹ ಬಿಕ್ಕಟ್ಟಿನ ಸನ್ನಿವೇಶ ಎದುರಾದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಇಂಟರ್‌ನೆಟ್ ಸ್ಥಗಿತಗೊಳಿಸಿದ್ದಾರೆ ಎಂದು ಸರಕಾರ ಬುಧವಾರ ಹೇಳಿದೆ.
ಸೈಬರ್‌ಸ್ಪೇಸ್ ಹಲವು ಸವಾಲುಗಳನ್ನು ಒಡ್ಡಿದೆ. ಇದರ ಮೂಲಕ ಮಾಹಿತಿಗಳು ಅತ್ಯಂತ ಕ್ಷಿಪ್ರವಾಗಿ ಪ್ರಸಾರವಾಗುತ್ತದೆ ಮತ್ತು ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರ ನೀಡಿದ ಗೃಹ ಇಲಾಖೆಯ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.
ಉದ್ವಿಗ್ನತೆ, ದೊಂಬಿ, ಹಿಂಸಾಚಾರದಂತಹ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷೆಯ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರಿಗೆ ಎದುರಾಗುವ ಬಿಕ್ಕಟ್ಟನ್ನು ತಪ್ಪಿಸಲು ಸಂಬಂಧಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು, ಟೆಲಿಕಾಂ ಸೇವೆಗಳ ತಾತ್ಕಾಲಿಕ ರದ್ದತಿ(ತಿದ್ದುಪಡಿ) ಕಾನೂನು 2020ರ ಅನ್ವಯ ಟೆಲಿಕಾಂ ಸೇವೆಯ ರದ್ದತಿ ಹಾಗೂ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರುತ್ತಾರೆ.
ಇಂಟರ್‌ನೆಟ್ ಸ್ಥಗಿತದ ಕುರಿತ ಕೇಂದ್ರೀಕೃತ ಅಂಕಿಅಂಶ ಕೇಂದ್ರ ಗೃಹ ಇಲಾಖೆಯ ಬಳಿ ಇರುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.







