ಟ್ರಾಕ್ಟರ್ ರ್ಯಾಲಿ ಸಂದರ್ಭದ ಹಿಂಸಾಚಾರ ಪ್ರಕರಣ: ಡಚ್ ಪ್ರಜೆ ಸಹಿತ ಇಬ್ಬರ ಬಂಧನ

ಹೊಸದಿಲ್ಲಿ, ಮಾ.10: ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ನಡೆದಿದ್ದ ರೈತರ ಟ್ರಾಕ್ಟರ್ ರ್ಯಾಲಿ ಸಂದರ್ಭದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಡಚ್ ಪ್ರಜೆ ಸಹಿತ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬ್ರಿಟನ್‌ನಲ್ಲಿ ನೆಲೆಸಿರುವ 23 ವರ್ಷದ ಡಚ್ ಪ್ರಜೆ ಮಣಿಂದರ್‌ಜಿತ್ ಸಿಂಗ್ ಹಾಗೂ 21 ವರ್ಷದ ದಿಲ್ಲಿ ನಿವಾಸಿ ಖೆಮ್‌ಪ್ರೀತ್ ಸಿಂಗ್‌ರನ್ನು ಮಂಗಳವಾರ ಬಂಧಿಸಿದ್ದು ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 14ಕ್ಕೆ ತಲುಪಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂಲತಃ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯವರಾದ ಖೆಮ್‌ಪ್ರೀತ್ ಸಿಂಗ್‌ನನ್ನು ನಕಲಿ ಪ್ರಯಾಣ ದಾಖಲೆಯೊಂದಿಗೆ ದಿಲ್ಲಿ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ನೇಪಾಳದ ಮೂಲಕ ಬ್ರಿಟನ್‌ಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ. ಈತನ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿತ್ತು ಖೆಮ್‌ಪ್ರೀತ್ ಸಿಂಗ್ ದಿಲ್ಲಿಯ ಖಾಯಲ ಪ್ರದೇಶದಲ್ಲಿ ತನ್ನ ಸಂಬಂಧಿಯ ಮನೆಯಲ್ಲಿ ಅವಿತು ಕುಳಿತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಮಣೀಂದರ್‌ಜಿತ್ ಸಿಂಗ್ ಅಲ್ಲಿದ್ದ ಎಂಬುದಕ್ಕೆ ವೀಡಿಯೊ ದಾಖಲೆ ಲಭಿಸಿದೆ. ಈತ ಕೈಯಲ್ಲಿ ಈಟಿ ಹಿಡಿದುಕೊಂಡಿದ್ದು ಗಲಭೆನಿರತ ಗುಂಪಿನೊಂದಿಗೇ ಇದ್ದ. ಇದಕ್ಕೂ ಮೊದಲು ಈತ ಹಲವು ಬಾರಿ ಸಿಂಘು ಗಡಿಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವುದಕ್ಕೂ ಪುರಾವೆ ಲಭಿಸಿದೆ.
ಇನ್ನೊಂದು ವೀಡಿಯೊದಲ್ಲಿ ಖೆಮ್‌ಪ್ರೀತ್ ಸಿಂಗ್ ಹಾಗೂ ಸಹಚರರು ಕೈಯಲ್ಲಿ ಈಟಿ ಹಿಡಿದುಕೊಂಡು ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.







