ದ್ವೇಷ ವರದಿ: ವಿಜಯ ಕರ್ನಾಟಕ ಸಂಪಾದಕರ ವಿರುದ್ಧ ಪ್ರೆಸ್ ಕೌನ್ಸಿಲ್‍ನಿಂದ ಜಾಮೀನು ಸಹಿತ ವಾರಂಟ್

ಹೊಸದಿಲ್ಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ವಿಜಯ ಕರ್ನಾಟಕ ದೈನಿಕದ ಸಂಪಾದಕರ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಚೋದನಾತ್ಮಕ ವರದಿ ಕುರಿತಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 5000ರೂ. ದಂಡ ಸೇರಿದಂತೆ ಜಾಮೀನು ಸಹಿತ ಬಂಧನ ವಾರಂಟ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.
ವಿಚಾರಣಾ ಹಂತದಲ್ಲಿರುವ ಈ ಪ್ರಕರಣದಲ್ಲಿ ಜಾರಿಗೊಳಿಸಲಾಗಿದ್ದ ಸಮನ್ಸ್ ಗೆ ದೈನಿಕದ ಸಂಪಾದಕರು ಹಾಜರಾಗದೇ ಇರುವ ಹಿನ್ನೆಲೆಯಲ್ಲಿ ವಾರಂಟ್ ಜಾರಿಯಾಗಿದೆ. ಪ್ರೆಸ್ ಕೌನ್ಸಿಲ್ ಆದೇಶವನ್ನು ಪಾಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು freespeechcollective.in ವರದಿ ಮಾಡಿದೆ. ಆದೇಶದ ಅನುಸರಣೆ ಖಚಿತಪಡಿಸಿಕೊಳ್ಳುವಂತೆ ಪಿಸಿಐ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಮೂಲದ ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ ಎಂಬ ಸಂಘಟನೆ ಈ ಪ್ರಕರಣ ದಾಖಲಿಸಿತ್ತು. ವಿಜಯಕರ್ನಾಟಕದ 28.03.2020 ಸಂಚಿಕೆಯಲ್ಲಿ "ಕೊರೊನಾದಿಂದ ಸತ್ತವರೆಲ್ಲ ಒಂದೇ ಸಮುದಾಯದವರು- ಈಗಲೂ ಪ್ರಾರ್ಥನೆ ಹೆಸರಲ್ಲಿ ಗುಂಪು ಸೇರುವುದೇಕೆ" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಯನ್ನು ಪ್ರಶ್ನಿಸಿ ದೂರು ಸಲ್ಲಿಸಲಾಗಿತ್ತು.
ಈ ವರದಿ ಪತ್ರಿಕೋದ್ಯಮ ಸಂಹಿತೆ 2019 ಅನ್ನು ಉಲ್ಲಂಘಿಸಿದೆ ಎಂದು ಹೇಳಿರುವ ಸಂಘಟನೆ ಈ ವರದಿ ಪ್ರಕಟಿಸಿದ್ದಕ್ಕಾಗಿ ಪತ್ರಿಕೆ ಸಾರ್ವಜನಿಕ ಕ್ಷಮಾಪಣೆ ಸಲ್ಲಿಸಬೇಕು ಹಾಗೂ ಪ್ರೆಸ್ ಕೌನ್ಸಿಲ್ ಪತ್ರಿಕೆಯನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು ಎಂದು ವರದಿ ತಿಳಿಸಿದೆ.
PCI issues warrant for arrest of Vijaya Karnataka editor https://t.co/oDpdmB2MAR
— geeta seshu (@geetaseshu) March 10, 2021







