ಗುಜರಾತ್ ಸರಕಾರ ಮಾಸ್ಕ್ ಧರಿಸದ ಜನರಿಂದ ಸಂಗ್ರಹಿಸಿದ ದಂಡ ಎಷ್ಟು ಕೋಟಿ ಗೊತ್ತೇ?

ಗಾಂಧಿನಗರ: ಎಪ್ರಿಲ್ 2020ರಿಂದ ಸೆಪ್ಟಂಬರ್ 2020ರ ತನಕ ಆರು ತಿಂಗಳ ಅವಧಿಯಲ್ಲಿ ಗುಜರಾತ್ ಸರಕಾರವು ಮಾಸ್ಕ್ ಧರಿಸದೇ ಇರುವ ಜನರಿಂದ ದಂಡದ ರೂಪದಲ್ಲಿ 168 ಕೋಟಿ ರೂ. ಸಂಗ್ರಹಿಸಿದೆ.
ರಾಜ್ಯ ವಿಧಾನಸಭೆಯಲ್ಲಿ ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ಚುಕ್ಕಿರಹಿತ ಪ್ರಶ್ನೆಗೆ ಉತ್ತರಿಸಿದ ಗೃಹ ಇಲಾಖೆಯ ಜವಾಬ್ದಾರಿಯನ್ನು ಹೊಂದಿರುವ ಮುಖ್ಯಮಂತ್ರಿ ವಿಜಯ ರೂಪಾನಿ ಬುಧವಾರ ಲಿಖಿತ ಉತ್ತರದಲ್ಲಿ ಈ ವಿಚಾರ ತಿಳಿಸಿದ್ದಾರೆ.
ಅಕ್ಟೋಬರ್ 2020ರಲ್ಲಿ ಮಾಸ್ಕ್ ಧರಿಸದ ತಪ್ಪಿಗೆ ವಿಧಿಸಿರುವ ದಂಡದಿಂದ ಸಂಗ್ರಹಿಸಿರುವ ದತ್ತಾಂಶವನ್ನು ರಾಜ್ಯ ಸರಕಾರ ಒದಗಿಸಿಲ್ಲ. ಮಾಸ್ಕ್ ಧರಿಸದವರಿಂದ ಪ್ರತಿ ತಿಂಗಳು ಸರಾಸರಿ 28 ಕೋ.ರೂ. ಸಂಗ್ರಹಿಸಲಾಗಿದೆ. ಎಪ್ರಿಲ್ 2020ರಿಂದ ಫೆಬ್ರವರಿ 2021ರ ಮಧ್ಯೆ ಮಾಸ್ಕ್ ಧರಿಸದವರಿಂದ ಸಂಗ್ರಹಿಸಿರುವ ದಂಡದ ಒಟ್ಟು ಮೊತ್ತ 308 ಕೋ.ರೂ.ವನ್ನು ದಾಟಿರಬಹುದು.
ಮಾಸ್ಕ್ ಧರಿಸದೇ ಇರುವುದಕ್ಕೆ ಪ್ರತಿ ವ್ಯಕ್ತಿಯಿಂದ 1,000 ರೂ. ದಂಡ ವಸೂಲಿ ಮಾಡಲಾಗಿದ್ದು, 16,78,922 ಜನರಿಂದ 168 ಕೋ.ರೂ.ವನ್ನು ಸರಕಾರವು ಸಂಗ್ರಹಿಸಿದೆ ಎಂದು ಸದನಕ್ಕೆ ಮುಖ್ಯಮಂತ್ರಿ ರೂಪಾನಿ ಮಾಹಿತಿ ನೀಡಿದರು. ಮಾಸ್ಕ್ ಧರಿಸದೇ ಇರುವುದಕ್ಕೆ ಆರಂಭದಲ್ಲಿ 200 ರೂ. ದಂಡ ವಿಧಿಸಲಾಗಿತ್ತು. ಬಳಿಕ ಲಾಕ್ ಡೌನ್ ವೇಳೆ ಅದನ್ನು 500 ರೂ. ಬಳಿಕ 1000 ರೂ.ಗೆ ಏರಿಸಲಾಗಿತ್ತು.





