ರಾಜ್ಯದಾದ್ಯಂತ ಶ್ರದ್ಧೆ ಭಕ್ತಿಯಿಂದ ಶಿವರಾತ್ರಿ ಆಚರಣೆ
ಬೆಂಗಳೂರು, ಮಾ.11: ನಾಡಿನಾದ್ಯಂತ ಶಿವರಾತ್ರಿ ಹಬ್ಬವನ್ನು ಭಕ್ತರು ಉಪವಾಸ, ಜಾಗರಣೆ ಮಾಡುವ ಮೂಲಕ ಭಕ್ತಿಭಾವದಿಂದ ಆಚರಿಸಿದರು. ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಬೆಂಗಳೂರಿನ ಕಾಡುಮಲ್ಲೇಶ್ವರ ದೇವಾಲಯ, ಗವಿಗಂಗಾಧರೇಶ್ವರ, ಬೇಗೂರಿನ ಕಾಶಿವಿಶ್ವೇಶ್ವರ ದೇವಸ್ಥಾನ ಒಳಗೊಂಡಂತೆ ನಗರದ ವಿವಿಧೆಡೆಯಿರುವ ಶಿವ ದೇವಸ್ಥಾನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತು ಶಿವನ ದರ್ಶನ ಪಡೆದರು.
ಕಾವ್ಯಶಿವರಾತ್ರಿ: ರಂಗಸಮುದ್ರ, ಕಾವ್ಯಮಂಡಲ ಮತ್ತು ಜನಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ಕಾವ್ಯಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ರಾಜ್ಯಪ್ರಶಸ್ತಿ ಪುರಸ್ಕೃತ ದೊಡ್ಡಗವಿ ಬಸಪ್ಪ ಮತ್ತು ಬಂಗಾರಶಿಟ್ಟಿ ತಂಡದವರು ಮಂಟೇಸ್ವಾಮಿ ಮಲೆ ಮಾದೇಶ್ವರ ಮಹಾಕಾವ್ಯಗಳನ್ನು ಹಾಡಿದರು. ಹಾಗೂ ಕವಿಗೋಷ್ಠಿಯನ್ನು ಆಯೋಜಿಲಾಗಿತ್ತು.
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ದೇವಾಲಯದಲ್ಲಿ ಪ್ರತಿವರ್ಷವೂ ಶಿವರಾತ್ರಿ ಹಬ್ಬದಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದರು. ಸುಮಾರು ನೂರು ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ಕಾಲ್ನಡಿಗೆಯ ಮೂಲಕ ಮಹದೇಶ್ವರ ಬೆಟ್ಟಕ್ಕೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ಹಬ್ಬವನ್ನು ಆಚರಿಸಲಾಗಿದೆ.
ಕೋಲಾರದ ಕೋಟಿ ಲಿಂಗೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸೇರಿದಂತೆ ಮೈಸೂರಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅನ್ನದಾನವನ್ನು ಏರ್ಪಡಿಸಲಾಗಿತ್ತು.
ಇನ್ನು ಕೊಡಗು, ಹಾಸನ, ರಾಮನಗರ ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಜನತೆ ಶಿವರಾತ್ರಿ ಪ್ರಯುಕ್ತ ಜಾಗರಣೆ ಆಚರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಗಣ್ಯರ ಶುಭಾಶಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಿವರಾತ್ರಿ ಪ್ರಯುಕ್ತ ಶಿವ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿ ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.







