ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿಗೆ ಕೊರೋನ

ಹೊಸದಿಲ್ಲಿ: ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿಗೆ ಕೊರೋನ ಪಾಸಿಟಿವ್ ಆಗಿದ್ದು, ಈ ವಿಚಾರವನ್ನು ಅವರು ಗುರುವಾರ ತಿಳಿಸಿದ್ದಾರೆ.
ನನಗೆ ಕೋವಿಡ್ -19 ಸೋಂಕು ತಗಲಿದೆ ಎಂದು ಹೇಳಲು ನನಗೆ ಹೆಚ್ಚೇನು ಸಂತೋಷವಾಗುತ್ತಿಲ್ಲ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ನಾನೀಗ ಆರೋಗ್ಯವಾಗಿದ್ದು, ನಿರಂತರವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗನೆ ಫುಟ್ಬಾಲ್ ಮೈದಾನಕ್ಕೆ ವಾಪಸಾಗುವೆ ಎಂದು ಚೆಟ್ರಿ ಟ್ವೀಟಿಸಿದ್ದಾರೆ.
ಚೆಟ್ರಿ ಇತ್ತೀಚೆಗೆ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ (ಐಎಸ್ ಎಲ್)ಭಾಗಿಯಾಗಿದ್ದು, ಬೆಂಗಳೂರು ಎಫ್ ಸಿ ಪರ ಆಡಿದ್ದರು. ಈ ಋತುವಿನಲ್ಲಿ ಬೆಂಗಳೂರು ಕಳಪೆ ಪ್ರದರ್ಶನ ನೀಡಿದ್ದು, ಲೀಗ್ ಹಂತದ ಬಳಿಕ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಕ್ರಮವಾಗಿ ಮಾರ್ಚ್ 25 ಹಾಗೂ 29ರಂದು ಒಮಾನ್ ಹಾಗೂ ಯುಎಇ ವಿರುದ್ಧ ದುಬೈನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಆಯ್ಕೆ ಮಾಡಿರುವ 35 ಸದಸ್ಯರನ್ನು ಒಳಗೊಂಡ ಭಾರತದ ಸಂಭಾವ್ಯ ತಂಡದಲ್ಲಿ ಚೆಟ್ರಿ ಆಯ್ಕೆಯಾಗಿದ್ದರು.
ಚೆಟ್ರಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಆಗಿದ್ದಾರೆ. 2017ರಲ್ಲಿ ಎಐ ಎಫ್ ಎಫ್ ವರ್ಷದ ಆಟಗಾರ ಪ್ರಶಸ್ತಿ ಜಯಿಸಿದ್ದಾರೆ.





