ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಜೀವ ಉಳಿಸಿದ ಭದ್ರತಾ ಅಧಿಕಾರಿ

ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್)ಅಧಿಕಾರಿಯೊಬ್ಬರು ಸಕಾಲದಲ್ಲಿ ಸಿಪಿ ಆರ್ ಮೂಲಕ ಪ್ರಜ್ಞಾಹೀನರಾಗಿ ಬಿದ್ದಿದ್ದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಲು ಯಶಸ್ವಿಯಾಗಿದ್ದಾರೆ.
ಬುಧವಾರ ಮಧ್ಯಾಹ್ನ 3:40ರ ಸುಮಾರಿಗೆ ಇಂದಿರಾ ಗಾಂಧಿ ಅಂತರ್ ರಾಷ್ಟ್ರೀಯ ವಿಮಾನನಿಲ್ದಾಣದ ಕಣ್ಗಾವಲು ಹಾಗೂ ಗುಪ್ತಚರ ತಂಡವು ವಿಮಾನ ನಿಲ್ದಾಣದ ಸಹಾಯ ಕೇಂದ್ರದಿಂದ ಟರ್ಮಿನಲ್-2ರ ರಿಟೈಲ್ ಪ್ರದೇಶದಲ್ಲಿ ಪ್ರಯಾಣಿಕರೊಬ್ಬರು ಕುರ್ಚಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ ಎಂಬ ಸಂದೇಶವನ್ನು ಸ್ವೀಕರಿಸಿದೆ ಎಂದು ಸಿಐ ಎಸ್ ಎಫ್ ತಿಳಿಸಿದೆ.
ಈ ಸಂದೇಶವನ್ನು ಸಿಐ ಎಸ್ ಎಫ್ ಕಣ್ಗಾವಲು ಸಿಬ್ಬಂದಿಯ ಸನ್ ಇನ್ಸ್ ಪೆಕ್ಟರ್ ಎಸ್.ಕೆ. ಯಾದವ್ ಹಾಗೂ ಕಾನ್ ಸ್ಟೇಬಲ್ ದೀಪಕ್ ಬಿಸ್ವಾಸ್ ಅವರಿಗೆ ರವಾನಿಸಲಾಗಿತ್ತು. ಪ್ರಯಾಣಿಕನ ಸ್ಥಿತಿಯನ್ನು ಗಮನಿಸಿದ ಕಾನ್ ಸ್ಟೇಬಲ್ ದೀಪಕ್ ಬಿಸ್ವಾಸ್ ಕೂಡಲೇ ಕಾರ್ಯ ಪ್ರವೃತ್ತರಾಗಿ ಪ್ರಥಮ ಚಿಕಿತ್ಸೆ ಸಿಪಿಆರ್ ನೀಡಿದರು. ಸಿಪಿ ಆರ್ ನಿಂದಾಗಿ ಪ್ರಯಾಣಿಕನ ಪ್ರಜ್ಞೆ ಮರಳಿ ಪ್ರತಿಕ್ರಿಯಿಸಲಾರಂಭಿದನು.
ಈ ಮಧ್ಯೆ ವೈದ್ಯರು ಕೂಡ ಸ್ಥಳಕ್ಕೆ ತಲುಪಿದರು. ಪ್ರಯಾಣಿಕನಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಪ್ರಯಾಣಿಕನನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ಮುಖ್ಯ ಕಾನ್ ಸ್ಟೇಬಲ್ ಎಸ್. ರವಿ ಜ್ಞಾನದಾಸ್ ಎಂದು ಗುರುತಿಸಲಾಗಿದೆ.
ತನ್ನ ಜೀವವನ್ನು ಉಳಿಸಿದ ಸಿಐಎಸ್ ಎಫ್ ಸಿಬ್ಬಂದಿಗೆ ರವಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.







