ಪತ್ರಕರ್ತೆ ಶಶಿಪ್ರಭಾ ಹಿರೇಮಠ ನಿಧನ

ಬೆಂಗಳೂರು, ಮಾ.11: ಹಿರಿಯ ಪತ್ರಕರ್ತೆ ಶಶಿಪ್ರಭಾ ಹಿರೇಮಠ(62) ಕಿರಿಯ ಪತ್ರಕರ್ತರಿಗೆಲ್ಲ ಹಿರಿಯಕ್ಕನಂತೆ ಇದ್ದವರು. ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ಮಾರ್ಗದರ್ಶಿಯಾಗಿದ್ದರು. ಅವರ ನಿಧನ ಮಹಿಳಾ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವೆಂದು ಮಹಿಳಾ ಪತ್ರಕರ್ತೆಯರ ಸಂಘ ನುಡಿನಮನ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘವು, ಸಭೆ, ಸಮಾರಂಭ ಅಥವಾ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆ ಶಶಿಪ್ರಭಾ ಹಾಜರಿದ್ದರೆ, ಉಳಿದ ಪತ್ರಕರ್ತರಿಗೆ ಧೈರ್ಯ ಇರುತ್ತಿತ್ತು. ಅದರಲ್ಲೂ ತರಬೇತಿ ಹಂತದಲ್ಲಿರುವ ಪತ್ರಕರ್ತರಿಗೆ ಸದಾ ಅವರ ಮಾರ್ಗದರ್ಶನ ಇರುತ್ತಿತ್ತೆಂದು ಸ್ಮರಿಸಿದೆ.
ಸಮಾಚಾರ ಭಾರತಿ ಸುದ್ದಿಸಂಸ್ಥೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಶಶಿಪ್ರಭಾ, ಲೋಕವಾಣಿ, ಈ ಸಂಜೆ, ಸಂಯುಕ್ತ ಕರ್ನಾಟಕ ಹಾಗೂ ಸಂಜೆವಾಣಿಗಳಲ್ಲಿ ಕೆಲಸ ಮಾಡಿ, ತಮ್ಮ ಸ್ನೇಹಮಯ ವ್ಯಕ್ತಿತ್ವದಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾದವರು. ಆಕಾಶವಾಣಿ, ಬೆಂಗಳೂರು ದೂರದರ್ಶನ, ಸಿಟಿ ಕೇಬಲ್ ಮತ್ತಿತರ ವಾಹಿನಿಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಚಲನಚಿತ್ರ ಸೆನ್ಸಾರ್ ಮಂಡಲಿಯಲ್ಲಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದ ಅವರು, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಲಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದರು.
ತೀವ್ರ ಹೃದಯಾಘಾತದಿಂದ ಇಂದು ಮುಂಜಾನೆ ಮೃತಪಟ್ಟ ಶಶಿಪ್ರಭಾ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 2 ಗಂಟೆಯವರೆಗೆ ಸ್ವಗೃಹ ನಂದಿನಿ ಬಡಾವಣೆಯಲ್ಲಿರಿಸಲಾಗಿದ್ದು, ನಂತರ ಸ್ವಗ್ರಾಮ ಸಕಲೇಶಪುರ ತಾಲೂಕಿನ ಹೆಗ್ಗಡಹಳ್ಳಿಗೆ ಕೊಂಡೊಯ್ದು, ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸದಸ್ಯರು ತಿಳಿಸಿದ್ದಾರೆ.







